ಅಧಿಕಾರಿಗಳ ಗೈರು: ಕುಚ್ಚೂರು ಪಂಚಾಯಿತಿ ಗ್ರಾಮಸಭೆ ರದ್ದು

Update: 2018-08-25 15:39 GMT

ಹೆಬ್ರಿ, ಆ.25: ಗ್ರಾಮಸಭೆಗೆ ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಶನಿವಾರ ನಡೆಯಬೇಕಿದ್ದ ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಪಂನ ಗಾಮಸಭೆಯನ್ನು ರದ್ದುಗೊಳಿಸಲಾಯಿತು.

19ನೇ ಸಾಲಿನ ಗ್ರಾಮಸಭೆಯು ಬೆಳಗ್ಗೆ 10:30ಕ್ಕೆ ಗ್ರಾಪಂ ಅಧ್ಯಕ್ಷ ರಾಮಣ್ಣ ಪೂಜಾರಿ ಅಧ್ಯಕ್ಷತೆಯಲ್ಲಿ ಆರಂಭಗೊಂಡು ಕಾಮಗಾರಿಗಳ ವಿವರ ಮಂಡನೆ ಮತ್ತು ವರದಿ ಮಂಡನೆ ನಡೆಯಿತು. ಹೆಬ್ರಿ ಸರಕಾರಿ ಸಮುದಾಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್ ಆರೋಗ್ಯ ಇಲಾಖೆಯ ಮಾಹಿತಿಯನ್ನು ನೀಡಿದರು.

ಇದಾದ ತಕ್ಷಣ ಗ್ರಾಮಸ್ಥರಾದ ಗ್ರಾಪಂನ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿದರು. ಆದರೆ ಉತ್ತರಿಸಬೇಕಾದ ಇಲಾಖೆಯ ಅಧಿಕಾರಿ ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ಗ್ರಾಮಸ್ಥರಾದ ರೋಶನ್ ಕುಮಾರ್ ಶೆಟ್ಟಿ, ದೇವಳಬೈಲು ಸುಧಾಕರ ಶೆಟ್ಟಿ, ಮಹೇಶ್ ಶೆಟ್ಟಿ, ರಮೀತ್ ಶೆಟ್ಟಿ, ಶಶಿಧರ ನಾಯ್ಕಿ, ವಿಜಯ ಕುಮಾರ್, ಉದಯ ನಾಯ್ಕಿ ಸೇರಿದಂತೆ ಹಲವು ಗ್ರಾಮಸ್ಥರು ಗ್ರಾಮಸಭೆ ರದ್ದುಗೊಳಿಸುವಂತೆ ಆಗ್ರಹಿಸಿದರು. ಆಗ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ ರಾಧಾಕೃಷ್ಣ ಶೆಟ್ಟಿ ಅವರಲ್ಲಿ ಸಮಾಲೋಚಿಸಿ ಗ್ರಾಮಸಭೆಯನ್ನು ರದ್ದುಗೊಳಿಸಲಾಯಿತು.

ಸಣ್ಣ ನೀರಾವರಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಗ್ರಾಮಸಭೆಯಲ್ಲಿ ಹಾಜರಿರುವಂತೆ ಗ್ರಾಪಂ ವತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು.

ಆ.20ರಂದು ನಡೆಯಬೇಕಿದ್ದ ಈ ಗ್ರಾಮಸಭೆಯನ್ನು ಮಾಜಿ ಪ್ರಧಾನಿ ವಾಜಪೇಯಿ ನಿಧನದ ಶೋಕಾಚರಣೆಯ ಹಿನ್ನಲೆಯಲ್ಲಿ ವಾರ್ಡುಸಭೆ ನಡೆಸಲಾಗದೆ ಗ್ರಾಮಸಭೆಯನ್ನು ರದ್ದುಗೊಳಿಸಲಾಗಿತ್ತು. 3 ವರ್ಷಗಳ ಹಿಂದೆ ಕೂಡ ಅಧಿಕಾರಿಗಳ ಗೈರುಹಾಜರಿ ಹಿನ್ನಲೆಯಲ್ಲಿ ಗ್ರಾಮಸಭೆಯನ್ನು ರದ್ದು ಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News