​ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿಷೇಧ ವಿಸ್ತರಣೆ

Update: 2018-08-25 15:41 GMT

ಮಂಗಳೂರು, ಆ. 25: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಪೂರ್ಣ ಸಂಚಾರವನ್ನು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಪುನಃ ಶನಿವಾರ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸುರಿದ ಭಾರೀ ಮಳೆಯಿಂದ ಕಾಮಗಾರಿಯು ಪೂರ್ಣಗೊಳಿಸಲು ಅಸಾಧ್ಯವಾಗಿದ್ದು, ಶಿರಾಡಿ ಘಾಟ್ ರಸ್ತೆಯು ವಾಹನ ಸಂಚಾರಕ್ಕೆ ಸೂಕ್ತವಾಗಿಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಇದ್ದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅನಾನುಕೂಲವಾಗುವುದರಿಂದ ಶಿರಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸುವ ಅಧಿಸೂಚನೆಯನ್ನು ವಿಸ್ತರಿಸಲಾಗಿದೆ.

ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆ ಭೂಕುಸಿತದಂತಹ ಅನಾಹುತ ಹೆಚ್ಚಾದ ಹಿನ್ನೆಲೆ ಆ.16ರಂದು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಆ.25ವರೆಗೆ ವಾಹನಗಳ ಸಂಪೂರ್ಣ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ಕಳೆದ  ಹತ್ತು ದಿನಗಳಿಂದ ಶಿರಾಡಿ ಘಾಟ್‌ನಲ್ಲಿ ಭಾರೀ ಮಳೆಯಾಗುತ್ತಿತ್ತು. ಅಲ್ಲಲ್ಲಿ ಭೂ ಕುಸಿತ ಸಂಭವಿಸಿದ್ದವು. ಇದರಿಂದ ಬೃಹತ್ ಮರಗಳ ಸಹಿತ ಭಾರೀ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಗೆ ಬಿದ್ದಿತ್ತು. ಇವುಗಳನ್ನು ತೆರವುಗೊಳಿಸಲು ಆರು ದಿನಗಳ ಕಾಲ ಈ ಹೆದ್ದಾರಿಯಲ್ಲಿ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ಅಂದಿನ ಆದೇಶದಲ್ಲಿ ನಿಷೇಧಿಸಿದ್ದರು.

ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ನಿಯಂತ್ರಣ ಸಿಬ್ಬಂದಿಯನ್ನು ನೇಮಕಗೊಳಿಸಲು ಪೊಲೀಸ್ ಅಧೀಕ್ಷಕರಿಗೆ ಅಧಿಕಾರ ಇರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News