ರಾಜಕೀಯ ನಾಯಕರಿಗೆ ಪ್ರಥಮ ದರ್ಜೆ ವಿಮಾನ ಯಾನ ನಿಷೇಧಿಸಿದ ಪಾಕಿಸ್ತಾನ

Update: 2018-08-25 17:42 GMT

ಇಸ್ಲಾಮಾಬಾದ್, ಆ.25: ಪಾಕಿಸ್ತಾನದ ನೂತನ ಸರಕಾರ, ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಸೇರಿದಂತೆ ಇತರ ಎಲ್ಲ ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೆ ಪ್ರಥಮ ದರ್ಜೆ ವಿಮಾನ ಯಾನ ಮತ್ತು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಅಧಿಕಾರಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಸರಕಾರಿ ನಿಧಿಯನ್ನು ತಮ್ಮ ವಿವೇಚನೆಯಿಂತೆ ಬಳಸುವುದರ ಮೇಲೆ ನಿಷೇಧ ಹೇರಿದೆ.

ಶುಕ್ರವಾರ ನೂತನ ಪ್ರಧಾನಿ ಇಮ್ರಾನ್‌ಖಾನ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಸಚಿವ ಫವದ್ ಚೌಧರಿ ತಿಳಿಸಿದ್ದಾರೆ.

ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ಅಧ್ಯಕ್ಷರು, ಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಶಾಸನ ಸಭೆಯ ಮುಖ್ಯಸ್ಥ. ರಾಷ್ಟ್ರೀಯ ಸಭೆಯ ಸಭಾಪತಿ ಹಾಗೂ ಮುಖ್ಯಮಂತ್ರಿಗಳು ಇನ್ನು ಮುಂದೆ ವಿಮಾನದಲ್ಲಿ ಕ್ಲಬ್ ಅಥವಾ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡಬೇಕು ಎಂದು ಮಾಧ್ಯಮಕ್ಕೆ ಹೊರಡಿಸಿದ ಪ್ರಕಟನೆಯಲ್ಲಿ ಚೌಧರಿ ತಿಳಿಸಿದ್ದಾರೆ. ಸೇನಾ ಮುಖ್ಯಸ್ಥರಿಗೆ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಅವರು ಹಿಂದಿನಿಂದಲೂ ಬಿಸಿನೆಸ್ ಕ್ಲಾಸ್‌ನಲ್ಲೇ ಪ್ರಯಾಣಿಸುತ್ತಿದ್ದರು ಎಂದು ಚೌಧರಿ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಸಿದ್ದಾರೆ. ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಇತರ ಜನಪ್ರತಿನಿಧಿಗಳು ಬಿಡುಗಡೆ ಮಾಡುವ ವಿವೇಚನಾತ್ಮಕ ಅನುದಾನಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿರುವ ಚೌದರಿ, ಮಾಜಿ ಪ್ರಧಾನಿ ನವಾಝ್ ಶರೀಫ್ ಒಂದು ವರ್ಷದಲ್ಲಿ 51 ಬಿಲಿಯನ್ ರೂ. ವನ್ನು ವಿವೇಚನಾತ್ಮಕ ನಿಧಿಗೆ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಕೂಡಾ ತಮ್ಮ ವಿದೇಶ ಮತ್ತು ದೇಶೀಯ ಪ್ರಯಾಣಗಳಿಗೆ ವಿಶೇಷ ವಿಮಾನವನ್ನು ಬಳಸದೆ ಬಿಸಿನೆಸ್ ಕ್ಲಾಸನ್ನೇ ಬಳಸಲು ನಿರ್ಧರಿಸಿದ್ದಾರೆ ಎಂದು ಚೌದರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಜುಲೈ 25ರಂದು ನಡೆಸ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಿ ಸ್ವೀಕರಿಸಿದ ಇಮ್ರಾನ್ ಖಾನ್ ಪ್ರಧಾನ ಮಂತ್ರಿಗಳಿಗೆ ಮೀಸಲಾಗಿರುವ ವೈಭವೋಪೇತ ಬಂಗಲೆಯಲ್ಲಿ ಉಳಿಯಲು ನಿರಾಕರಿಸಿ, ಪ್ರಧಾನಿಯ ಸೇನಾ ಕಾರ್ಯದರ್ಶಿ ತಂಗುತ್ತಿದ್ದ ಅದೇ ಬಂಗಲೆಯ ಸಣ್ಣ ಭಾಗವನ್ನು ಬಳಸಲು ನಿರ್ಧರಿಸಿದ್ದರು. ವಿಸ್ತಾರವಾದ ಅಧಿಕೃತ ಶಿಷ್ಟಾಚಾರವನ್ನು ನಿರಾಕರಿಸಿದ ಅವರು ಕೇವಲ ಎರಡು ವಾಹನಗಳನ್ನು ಮತ್ತು ಇಬ್ಬರು ಕೆಲಸಗಾರರನ್ನು ಬಳಸಲು ನಿರ್ಧರಿಸಿದ್ದರು. ಸಂಪುಟ ಸಭೆಯಲ್ಲಿ, ಸದ್ಯ ಇರುವ ವಾರದಲ್ಲಿ ಐದು ದಿನಗಳ ಕೆಲಸವನ್ನು ರದ್ದುಗೊಳಿಸಿ ಆರು ದಿನಕ್ಕೆ ಬದಲಾಯಿಸಿದಾಗ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದನ್ನು ಮರಳಿ ಐದು ದಿನಕ್ಕೆ ಇಳಿಸಲಾಯಿತು.

ವಿದ್ಯುತ್ ಕೊರತೆ ಮತ್ತು ಇಂಧನ ಉಳಿಸುವ ಉದ್ದೇಶದಿಂದ 2011ರಲ್ಲಿ ವಾರದಲ್ಲಿ ಐದು ದಿನ ಕೆಲಸವನ್ನು ಅನುಷ್ಠಾನಕ್ಕೆ ತರಲಾಗಿತ್ತು. ಕೆಲಸದ ದಿನಗಳನ್ನು ಐದಕ್ಕೆ ಇಳಿಸಿರುವುದರಿಂದ ಸರಕಾರಿ ಸೇವಕರ ಕಾರ್ಯಕ್ಷಮತೆಯಲ್ಲಿ ಅಥವಾ ಪ್ರತಿಫಲದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸಂಪುಟ ಬೆಟ್ಟು ಮಾಡಿತ್ತು. ಕೆಲಸದ ದಿನಗಳನ್ನು ಈ ಹಿಂದಿನ ಐದು ದಿನಗಳಿಗೆ ಇಳಿಸಿದ ಸಂಪುಟ ಕೆಲಸದ ಸಮಯವನ್ನು 8-4ರಿಂದ 9-5ಕ್ಕೆ ಬದಲಾಯಿಸಿದೆ. ಪಂಜಾಬ್ ಮತ್ತು ಖೈಬರ್ ಫಕ್ತುಂಕ್ವಾ ಪ್ರದೇಶದಲ್ಲಿ ಹಿಂದಿನ ಸರಕಾರ ನಡೆಸಿರುವ ಬೃಹತ್ ಸಾರಿಗೆ ಯೋಜನೆಗಳ ಆಡಿಟ್ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಚೌದರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News