×
Ad

ಇಂದ್ರಿಯಗಳನ್ನು ನಿಯಂತ್ರಿಸದಿದ್ದರೆ ವ್ಯಸನಗಳಿಗೆ ಬಲಿ: ಅದಮಾರು ಶ್ರೀ

Update: 2018-08-25 23:13 IST

ಮಣಿಪಾಲ, ಆ.25: ಮನಸ್ಸು ಮನುಷ್ಯನನ್ನು ಬಂಧನಕ್ಕೆ ಒಳಪಡಿಸುತ್ತದೆ. ಮನಸ್ಸು ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಇಲ್ಲದಿದ್ದರೆ ಜೀವನ ವ್ಯಸನವೆಂಬ ಪ್ರಪಾತಕ್ಕೆ ಬಿದ್ದು ಬಿಡುತ್ತದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

 ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್‌ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಕೆನರಾ ಮಾಲ್ನಲ್ಲಿ ಶನಿವಾರ ಆಯೋಜಿಸಲಾದ ಮಾದಕ ವ್ಯಸನ ವಿರುದ್ದ ಸೆಲ್ಫಿ ವಿದ್ ಸಹಿ ಅಭಿಯಾನ ಕಾರ್ಯಕ್ರಮಲ್ಲಿ ಅವರು ಆಶೀರ್ವಚನ ನೀಡಿದರು.

ಮೆದುಳಿಗೆ ಕೆಟ್ಟ ವಿಚಾರಗಳನ್ನು ತುಂಬಿಸದೆ ಸದ್ವಿಚಾರ ತುಂಬಿಸಬೇಕು. ಮಾದಕ ವ್ಯಸನಗಳು ಕ್ಷಣಿಕ ತೃಪ್ತಿ ಕೊಡುತ್ತದೆ. ನಮ್ಮ ಸಂಘ, ಸಂಗಾತಿ ಚೆನ್ನಾಗಿರಬೇಕು. ಸಂಘ ಚೆನ್ನಾಗಿದ್ದರೆ ಜೀವನ ಚೆನ್ನಾಗಿರುತ್ತದೆ. ಕುಟುಂಬ ಪದ್ಧತಿ ಇಲ್ಲ. ಕೂಡು ಸಂಸಾರ ವ್ಯವಸ್ಥೆ ಕುಸಿದುಹೋಗಿದೆ. ನಮ್ಮ ಆಹಾರ ಪದ್ಧತಿ ಸರಿಯಿಲ್ಲದೆ ಇರುವುದಕ್ಕೆ ಮಕ್ಕಳು ದುಷ್ಚಟದತ್ತ ಮುಖಮಾಡುತ್ತಿದ್ದಾರೆ ಎಂದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ತಾತ್ಕಾಲಿಕ ಸಂತಸ, ಆನಂದ ಜೀವನವನ್ನೇ ಹಾಳು ಮಾಡುತ್ತದೆ. ಸ್ನೇಹಿತರ ಒತ್ತಡ ಹಾಗೂ ಕುಟುಂಬದ ಸಮಸ್ಯೆಯಿಂದ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದೆ. ವ್ಯಸನ ಸಂಬಂಧಗಳ ಮೇಲೆ ಪರಿಣಾಮ ಬೀಳುತ್ತದೆ. ಮಾದಕ ವಸ್ತು ಬುದ್ಧಿಜೀವಿ ಮಾನವನನ್ನು ಗುಲಾಮರನ್ನಾಗಿಸುತ್ತದೆ ಎಂದರು.

ಮಲ್ಪೆಅಬೂಬಕ್ಕರ್ ಸಿದ್ದೀಕಿ ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿ, ದೇವರು ಕೆಡುಕನ್ನು ನಿರ್ಮೂಲನೆ ಮಾಡಲು ಒಳಿತಿನ ಸಂಸ್ಥಾಪನೆ ಮಾಡಲು ಮನುಷ್ಯನನ್ನು ಸೃಷ್ಠಿ ಮಾಡಿದ್ದಾನೆ. ಸಜ್ಜನರ ಮೌನ ಸಮಾಜದ ಕೆಡುಕಿಗೆ ಕಾರಣ. ಪೋಷಕರು ಕೇವಲ ಪೋಷಕರಾಗದೆ ಮಕ್ಕಳ ಪಾಲಿಗೆ ತರಬೇತುದಾರರಾಗಬೇಕು. ದಾರಿ ತಪ್ಪಿದಾಗ ಸರಿಯಾದ ದಾರಿಗೆ ತರುವ ಕೆಲಸ ನಿಮ್ಮಿಂದ ಆಗಬೇಕೆಂದು ಹೇಳಿದರು.

ಪ್ರಶಸ್ತಿ ವಿಜೇತ ನಟ ವಿಜಯ್ ಮಯ್ಯ ಐಲ, ಕೆನರಾ ಮಾಲ್ ವ್ಯವಸ್ಥಾಪಕ ಪ್ರಕಾಶ್, ಅಕ್ಯುಮೆನ್ ಟ್ರೈನಿಂಗ್ ಸೆಂಟರ್‌ನ ಮ್ಯಾನೇಜಿಂಗ್ ಟ್ರಸ್ಟಿ ಜೊಯೆಲ್ ಸೋನ್ಸ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವಾಕರ ಹಿರಿಯಡ್ಕ ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಸಂಚಾಲಕ ನಾಗರಾಜ್ ರಾವ್ ವಂದಿಸಿದರು. ಸಂತೋಷ್ ಸರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಚಾರ್ತುಮಾಸ್ಯ ವೃತದಲ್ಲಿರುವ ಅದಮಾರು ಕಿರಿಯ ಸ್ವಾಮೀಜಿ ಉಡುಪಿ ಯಿಂದ ನೂರಾರು ವಿದ್ಯಾರ್ಥಿಗಳೊಂದಿಗೆ ಸುಮಾರು ಆರು ಕಿ.ಮೀ. ದೂರದ ಮಣಿಪಾಲದ ಕೆನರಾ ಮಾಲ್‌ವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News