ಪಟಿದಾರ್ ಮೀಸಲಾತಿಗೆ ಆಗ್ರಹಿಸಿ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ

Update: 2018-08-25 18:11 GMT

ಅಹ್ಮದಾಬಾದ್, ಆ.25: ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಲು ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಹಾರ್ದಿಕ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಈ ಸಂದರ್ಭ ಅವರ ಬೆಂಬಲಿಗರು ಹಾಗೂ ಹಲವು ಕಾಂಗ್ರೆಸ್ ಶಾಸಕರಿದ್ದರು.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರವಿವಾರದಿಂದ ಹಾರ್ದಿಕ್ ಜೊತೆ ಸಾಂಕೇತಿಕವಾಗಿ ತಾನು ಕೂಡಾ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಕಾಂಗ್ರೆಸ್ ಶಾಸಕ ಲಲಿತ್ ವಸೋಯಾ ತಿಳಿಸಿದ್ದಾರೆ.

ಇದಕ್ಕೂ ಮೊದಲು, ರಾಜ್ಯದ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಳ್ಳಲು ಅನುಮತಿ ನೀಡಬೇಕೆಂಬ ಹಾರ್ದಿಕ್ ಮನವಿಯನ್ನು ಗುಜರಾತ್ ಸರಕಾರ ತಳ್ಳಿಹಾಕಿತ್ತು. ತನ್ನ ಆಂದೋಲನವನ್ನು ಹತ್ತಿಕ್ಕಲು ಗುಜರಾತ್ ಸರಕಾರ ಪ್ರಯತ್ನಿಸುತ್ತಿದೆ ಎಂದು ಹಾರ್ದಿಕ್ ಆರೋಪಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಸರಕಾರ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದೆ. ತನ್ನ 16 ಸಾವಿರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದು, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಆಗಮಿಸುವ ಬೆಂಬಲಿಗರನ್ನು ತಡೆಯುತ್ತಿದ್ದಾರೆ ಎಂದು ಹಾರ್ದಿಕ್ ಆರೋಪಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನಿಸಿ 158 ಮಂದಿಯನ್ನು ಬಂಧಿಸಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News