ನಿರಾಶ್ರಿತ ಶಿಬಿರದಲ್ಲೇ ನಡೆಯಿತು ಯುವತಿಯ ಅದ್ದೂರಿ ಮದುವೆ

Update: 2018-08-26 09:58 GMT

ಮಡಿಕೇರಿ, ಆ. 26: ಭಾರೀ ಮಳೆ ಹಾಗೂ ಜಲ ಪ್ರಳಯದಲ್ಲಿ ತತ್ತರಿಸಿರುವ ಮಡಿಕೇರಿಯಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡಿರುವ ಯುವತಿಯೊಬ್ಬಳ ಮದುವೆ ಜಿಲ್ಲಾಡಳಿತ, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರಾಶ್ರಿತ ಶಿಬಿರದಲ್ಲಿ ರವಿವಾರ ಅದ್ದೂರಿಯಾಗಿ ನೆರವೇರಿತು.

ಮಡಿಕೇರಿ ತಾಲೂಕಿನ ಮಕ್ಕಂದೂರು ನಿವಾಸಿ ಮಂಜುಳಾ ಮತ್ತು ಕೇರಳ ಕಣ್ಣೂರು ಕೂತುಪರಂಬು ನಿವಾಸಿ ರಜೀಶ್ ಮದೆಯಾದವರು.

ಮಂಜುಳಾ ಮತ್ತು ರಾಜೇಶ್ ಅವರ ವಿವಾಹ ನಿಶ್ಚಿತಾರ್ಥ ಈ ಹಿಂದೆ ನಿಗದಿಯಾಗಿತ್ತು. ಅದರಂತೆ ಆಗಸ್ಟ್ 26ರಂದು ಬೆಳಗ್ಗೆ 10:30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ ಇನ್ನೇನು ಮದುವೆಗೆ 10 ದಿನ ಬಾಕಿ ಇರುವಾಗ ಭಾರೀ ಮಳೆಗೆ ಭೂಕುಸಿತ ಉಂಟಾಗಿ ಮನೆ ಕಳೆದುಕೊಂಡ ಮಂಜುಳಾ ಕುಟುಂಬ ಮಡಿಕೇರಿ ನಗರದಲ್ಲಿ ಇರುವ ಶ್ರೀ ಗೆಜ್ಜೆ ಸಂಗಪ್ಪ ಕಂಚಮ್ಮ ಅನುಭವ ಮಂಟಪದಲ್ಲಿ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿದ್ದರು.

ಮನೆ ಕಳೆದುಕೊಂಡು ನಿರಾಶ್ರಿತ ಶಿಬಿರದಲ್ಲಿರುವುದರಿಂದ ಮದುವೆ ಮುಂದೂಡುವ ಹಂತದವರೆಗೆ ತಲುಪಿತ್ತು. ಈ ಮಾಹಿತಿ ದೊರೆತ ಮಡಿಕೇರಿ ಲಯನ್ಸ್ ಕ್ಲಬ್ ಮತ್ತು ಸೇವಾ ಭಾರತಿಯ ಪದಾಧಿಕಾರಿಗಳು ಈ ಹಿಂದೆ ನಿಗದಿಯಾದ ಮುಹೂರ್ತದಂತೆ ಮಡಿಕೇರಿ ನಗರದ ಓಂಕಾರೇಶ್ವರಿ ದೇವಸ್ಥಾನದಲ್ಲಿ ಮದುವೆ ಕಾರ್ಯ ನಡೆಯಿತು. ಬಳಿಕ ನಿರಾಶ್ರಿತ ಶಿಬಿರ ಇರುವ ಶ್ರೀ ಗೆಜ್ಜೆ ಸಂಗಪ್ಪ ಕಂಚಮ್ಮ ಅನುಭವ ಮಂಟಪದಲ್ಲಿ ಭೋಜನಾ ವ್ಯವಸ್ಥೆ ಏರ್ಪಡಿಸಲಾಯಿತು. ಮದುವೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಮದುವೆಯಲ್ಲಿ ಪಾಲ್ಗೊಂಡವರಿಗೆ ಸಿಹಿ ತಿಂಡಿಯ ಪ್ಯಾಕೇಟ್ ವಿತರಿಸಲಾಯಿತು.

ಮದುವೆ ಕಾರ್ಯದಲ್ಲಿ ನಿರಾಶ್ರಿತರ ಸಹಿತ ಸ್ಥಳೀಯ ನೂರರಷ್ಟು ಮಂದಿ ಪಾಲ್ಗೊಂಡರು. ಅಲ್ಲದೆ ಮದುವೆ ಕಾರ್ಯದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಶ್ರೀವಿದ್ಯಾ ನೂತನ ವಧು ವರನಿಗೆ ಶುಭ ಹಾರೈಸಿದರು. ಭೋಜನ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ, ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಮಂಜುಳಾರ ವಿವಾಹ ಈ ಹಿಂದೆ ನಿಗದಿಯಾದಂತೆ ಇಂದು ನೆರವೇರಿದೆ. ಇದಕ್ಕೇ ಬೇಕಾದ ಸಹಕಾರವನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ನುಡಿದರು.

ನಿರಾಶ್ರಿತರಾದ ಮಂಜುಳಾ ಅವರ ವಿವಾಹವನ್ನು ಮುಂದೂಡುವ ಬಗ್ಗೆ ಕುಟುಂಬದವರ ನಡುವೆ ಮಧ್ಯೆ ಮಾತುಕತೆ ನಡೆದಿತ್ತು. ಆದರೆ ಮದುವೆ ಮುಂದೂಡದೆ ಅದ್ದೂರಿಯಾಗಿ ನಡೆಸಲು ಲಯನ್ಸ್ ಕ್ಲಬ್, ಸೇವಾ ಭಾರತಿ ಮುಖಂಡರು ನಿರ್ಧರಿಸಿದ್ದರು. ಅದರಂತೆ ಇಂದು ಜಿಲ್ಲಾಡಳಿತ ಮತ್ತು ಊರಿನವರ ಸಹಕಾರದಿಂದ ಅದ್ದೂರಿಯಾಗಿ ನೆರವೇರಿದೆ. ವಧುವಿಗೆ ಕುಟುಂಬ ಮದುವೆಗಾಗಿ ಮಾಡಿಟ್ಟಿದ್ದ ಚಿನ್ನಾಭರಣಗಳು ಮನೆಯೊಂದಿಗೆ ಧರೆಶಾಯಿಯಾಗಿದೆ. ಆದ್ದರಿಂದ ವಧುಗೆ ಬೇಕಾದ ಚಿನ್ನಾಭರಣ, ವಸ್ತ್ರಗಳನ್ನು ಪೂರೈಸಲಾಗಿದೆ. ಅಲ್ಲದೆ ಉತ್ತಮ ಭೋಜನಾ ವ್ಯವಸ್ಥೆಯನ್ನೂ ಮಾಡಲಾಗಿದೆ.

- ಬಿ.ಎಂ.ರಾಜೇಶ್, ಸೇವಾ ಭಾರತಿಯ ಮುಖ್ಯಸ್ತ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News