×
Ad

ಸಂವಿಧಾನ ವಿರೋಧಿಗಳಿಂದ ಸಮಾಜ ಒಡೆಯುವ ಹುನ್ನಾರ: ನಾರಾಯಣ ಮಣೂರು

Update: 2018-08-26 19:26 IST

ಉಡುಪಿ, ಆ.26: ಪ್ರಾಥಮಿಕ ಶಾಲೆಗೂ ಹೋಗದೆ ಮಠದೊಳಗೆ ಖಾವಿ ಧರಿಸಿಕೊಂಡು ಸಂವಿಧಾನದ ವಿರುದ್ಧ ಮಾತನಾಡುವ ಮಠಾಧೀಶರಿಗೆ ಯಾವುದೇ ನೈತಿಕತೆ ಹಾಗೂ ಜ್ಞಾನ ಇಲ್ಲ. ಸಂವಿಧಾನ ವಿರೋಧಿ ಮನುವಾದಿಗಳು ಹಾಗೂ ಸಂಘಪರಿವಾರ ಕುತಂತ್ರದಿಂದ ಸಮಾಜವನ್ನು ಒಡೆಯುವ ಹುನ್ನಾರ ಮಾಡುತ್ತಿದೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಉಡುಪಿ ಜಿಲ್ಲೆ ಮತ್ತು ಸಹಭಾಗಿ ಸಂಘಟನೆಗಳ ನೇತೃತ್ವದಲ್ಲಿ ದೆಹಲಿಯಲ್ಲಿ ಸಂವಿಧಾನ ಸುಟ್ಟ ದೇಶದ್ರೋಹಿ ಕೃತ್ಯದ ವಿರುದ್ಧ ರವಿವಾರ ಅಜ್ಜರಕಾಡು ಸೈನಿಕ ಸ್ಮಾರಕದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕೋಮುವಾದಿ ಸಂಘಟನೆಗಳು ಹಿಂದುಳಿದ ವರ್ಗದವರಲ್ಲಿ ಧರ್ಮದ ಹೆಸರಿನಲ್ಲಿ ಭಯ ಹಾಗೂ ವಿಷದ ಬೀಜವನ್ನು ಬಿತ್ತುತ್ತಿವೆ. ಇಲ್ಲಿರುವ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಬ್ರಾಹ್ಮಣಶಾಹಿ ವ್ಯವಸ್ಥೆಯ ದೌರ್ಜನ್ಯ ಸಹಿಸಲು ಸಾಧ್ಯವಾಗದೆ ಮತಾಂತರಗೊಂಡ ದ್ರಾವಿಡರು ಹಾಗೂ ದಲಿತರೇ ಹೊರತು ಹೊರಗಿನಿಂದ ಬಂದವರಲ್ಲ. ಇವರು ಭಾರತದ ಸಂಸ್ಕೃತಿಯ ಎತ್ತಿ ಹಿಡಿಯುವ ಮೂಲಕ ದೇಶಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕೋಮುವಾದಿ ಸಂಘಟನೆಗಳು ಹಿಂದುಳಿದವರ್ಗದರಲ್ಲಿ ಮೀಸಲಾತಿ ಹೆಸರಿನಲ್ಲಿ ದಲಿತ ವಿರೋಧಿ ಭಾವನೆ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಸಂವಿಧಾನದಲ್ಲಿ ದಲಿತರಿಗೆ ಕೇವಲ ಶೇ.18ರಷ್ಟು ಮೀಸಲಾತಿ ನೀಡಿದ್ದರೆ ಶೇ.32ರಷ್ಟು ಹಿಂದುಳಿದವರ್ಗವರಿಗೆ ನೀಡಲಾಗಿದೆ. ಇದು ಅಂಬೇಡ್ಕರ್ ಮಾತೃತ್ವ ಪ್ರೀತಿಯಿಂದ ಕೊಟ್ಟ ಕಾಣಿಕೆಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಚಾಹ ಮಾರಾಟ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಇಂದು ಪ್ರಧಾನಿ ಆಗಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂಬುದನ್ನು ಎಲ್ಲರು ತಿಳಿದು ಕೊಳ್ಳಬೇಕು. ಇದೀಗ ಸಂವಿಧಾನವನ್ನು ಸುಡುವ ಮೂಲಕ ಮತ್ತೊಂದು ಸುತ್ತಿನಲ್ಲಿ ಅಧಿಕಾರಕ್ಕೇರಲು ಹುನ್ನಾರ ಮಾಡಲಾಗುತ್ತಿದೆ. ಯಾವುದೇ ತಾರತಮ್ಯ ಇಲ್ಲದೆ ಭಾರತದ ಸಮಗ್ರ ಜನರಿಗೆ ಬದುಕು ಕಲ್ಪಿಸಿ ಕೊಡುವ ಸಂವಿಧಾನವನ್ನು ಉಳಿಸಿ ಕೊಳ್ಳಲು ನಾವೆಲ್ಲ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಬಾಬರಿ ಮಸೀದಿ ದ್ವಂಸ, ಮುಂಬೈ ಗಲಭೆ, ಗುಜರಾತ್ ಗಲಭೆ, ಕಂದಮಾಲ್ ಹಿಂಸೆಗಳ ಅಪರಾಧಿಗಳಿಗೆ ಈವರೆಗೆ ಶಿಕ್ಷೆಯಾಗಿಲ್ಲ. ಸಂಘಪರಿವಾರದ ಹಿಂಸೆಯಲ್ಲಿರುವ ಶ್ರಮ ವಿಭಜನೆ ಯಿಂದ ಆರೋಪಿಗಳು ಯಾರು ಎಂಬುದೇ ಸ್ಪಷ್ಟ ಇಲ್ಲ. ಇಲ್ಲಿ ತಾಕೀತು ಮಾಡು ವವರು, ತತ್ವವನ್ನು ನಿರೂಪಿಸುವವರು, ಹಿಂಸೆ ನಡೆಸುವವರು ಎಲ್ಲವೂ ಬೇರೆ ಬೇರೆ. ಆದುದರಿಂದ ಸಂಘಟನೆ, ಭಾಷಣ ಮಾಡುವವ ನಾಯಕರು ಸೇರಿದಂತೆ ಯಾರಿಗೂ ಶಿಕ್ಷೆ ಆಗುತ್ತಿಲ್ಲ ಎಂದರು.

ಸಭೆಯಲ್ಲಿ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ತರ್, ಸುಂದರ್ ಗುಜ್ಜರಬೆಟ್ಟು, ವಾಸು ನೇಜಾರು, ರೆ.ಫಾ.ವಿಲಿಯಂ ಮಾರ್ಟಿಸ್, ಎಸ್.ಎಸ್.ಪ್ರಸಾದ್, ಶೇಖರ್ ಹೆಜ್ಮಾಡಿ, ಪ್ರೊ.ಸಿರಿಲ್ ಮಥಾಯಸ್, ಅಝೀಝ್ ಉದ್ಯಾವರ, ಮಂಜುನಾಥ್ ವಿ., ರಮೇಶ್ ಕೋಟ್ಯಾನ್, ಅಣ್ಣಪ್ಪ ಮುದ್ರಾಡಿ, ಡಿ.ಎಸ್.ಬೆಂಗ್ರೆ, ಪರಮೇಶ್ವರ ಉಪ್ಪೂರು, ಪ್ರೊ. ಫಣಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಅಜ್ಜರ ಕಾಡುವರೆಗೆ ‘ಸಂವಿಧಾನ ಗೌರವಿಸಿ, ಭಾರತ ಉಳಿಸಿ’ ಎಂದ ಘೋಷಣೆ ಯೊಂದಿಗೆ ಸಂವಿಧಾನದ ಮೆರವಣಿಗೆ ನಡೆಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News