×
Ad

1195 ವಿದ್ಯಾರ್ಥಿಗಳಿಗೆ 92ಲಕ್ಷ ರೂ. ವಿದ್ಯಾಪೋಷಕ್ ಸಹಾಯಧನ ವಿತರಣೆ

Update: 2018-08-26 19:51 IST

ಉಡುಪಿ, ಆ. 26: ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿಯ ವಿದ್ಯಾ ಪೋಷಕ್, ಯಕ್ಷಗಾನ ಕಲಾರಂಗದ ವತಿಯಿಂದ ಉಡುಪಿ ಜಿಲ್ಲೆಯ 1195 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 92 ಲಕ್ಷ ರೂ. ಸಹಾಯಧನ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನ ಕಲಾರಂಗವು ನದಿಯಂತೆ ಏನೂ ಇಲ್ಲದವ ರಿಗೆ ಕೊಡುವ ಕೆಲಸ ಮಾಡಿಕೊಂಡು ಸಾಗುತ್ತಿದೆ. ಇವರದ್ದು ಬಹುಮುಖ ಸೇವೆ. ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್‌ಗಳಾಗಿ ಸಮಾಜಕ್ಕೆ ಸೇವೆ ನೀಡಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್ ಮಾತನಾಡಿ, ಮಕ್ಕಳಿಗೆ ಒತ್ತಡ ಹೇರುವ ಕೆಲಸ ಮಾಡಬೇಡಿ. ಅವರೇ ಮನ ಸಾಕ್ಷಿಯಂತೆ ಕೆಲಸ ಮಾಡುವಂತೆ ಆಗಬೇಕು. ಸಂಸ್ಕಾರ, ಸಂಸಕ್ಕತಿಯನ್ನು ಪಾಲಿಸುವ ಕೆಲಸ ಮಕ್ಕಳಿಂದ ಆಗಬೇಕು. ಸಹಾಯ ಮಾಡಿದವರಿಗೆ ಪ್ರತಿ ಸಹಾಯ ಮಾಡುವ ಪ್ರವೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಶುಭಾಶಂಸನೆಗೈದರು. ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಗಾಣಿಗ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಗಿರಿಧರ್ ಕಾಮತ್, ಧೀರಜ್ ಹೆಜಮಾಡಿ, ರತ್ನ ಕುಮಾರ್, ಡಾ.ತಲ್ಲೂರು ಶಿವರಾಮ ಶೆಟ್ಟಿ, ಜಿ.ಶ್ರೀನಿವಾಸ್, ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್, ಪಿ.ಪುರುಷೋತ್ತಮ ಶೆಟ್ಟಿ, ಆರ್. ಉಪೇಂದ್ರ ಶೆಟ್ಟಿ, ಪುರುಷೋತ್ತಮ ಪಟೇಲ್, ಯು.ವಿಶ್ವನಾಥ್ ಶೆಣೈ, ಹರಿ ಯಪ್ಪ ಕೋಟ್ಯಾನ್, ಸಾಧು ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News