ತಿಂಗಳ ಮೂರನೆ ರವಿವಾರ ಠಾಣೆಗಳಲ್ಲಿ ದಲಿತರ ಕುಂದುಕೊರತೆ ಸಭೆ ನಡೆಸಿ

Update: 2018-08-26 14:32 GMT

ಮಂಗಳೂರು, ಆ. 26: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತೀ ತಿಂಗಳ ಮೂರನೇ ರವಿವಾರ ದಲಿತರ ಕುಂದು ಕೊರತೆ ಸಭೆ ನಡೆಸಿ ನಡಾವಳಿಯನ್ನು ಆಯುಕ್ತರ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಸೂಚಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ದಲಿತ ಕುಂದು ಕೊರತೆಯ ಮಾಸಿಕ ಸಭೆಯಲ್ಲಿ ಕೇಳಿ ಬಂದ ಅಹವಾಲುಗಳಿಗೆ ಅವರು ಪ್ರತಿಕ್ರಿಯಿಸಿದರು.

ಠಾಣಾ ವ್ಯಾಪ್ತಿಯ ದಲಿತ ಮುಖಂಡರಿಗೆ ಸಭೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದ ಡಿಸಿಪಿ ಹನುಮಂತರಾಯ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಜ್ಯೋತಿ ಎಂಬವರು ಮಾತನಾಡಿ ಶಿವನಾಥನ್ ಎಂಬವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಲೋಕೋಪಯೋಗಿ ಇಲಾಖೆ ಮತ್ತು ಮಹಾ ನಗರಪಾಲಿಕೆಯಲ್ಲಿ ಮೀಸಲಾತಿ ಕೋಟಾದಡಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿ, ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾಗಿದೆ. ಹಲವು ಪ್ರಕ್ರಿಯೆಗಳಿರುವುದರಿಂದ ಜಿಲ್ಲಾಧಿಕಾರಿ ಸಭೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಕಾರಣ ವಿಳಂಬವಾಗಿದೆ ಎಂದು ಪ್ರತಿಕ್ರಿಯಿಸಿದರು.

ಕಾವೂರು ಬಳಿಯ ಡಿಸಿ ಮನ್ನಾ ಜಾಗ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾಗಿದೆ. ಅಲ್ಲಿ ಅನುಮತಿ ಪಡೆಯದೆ ಮೊಸರು ಕುಡಿಕೆ ಆಯೋಜಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ತಾತ್ಕಾಲಿಕವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸುವುದರಲ್ಲಿ ತಪ್ಪಿಲ್ಲ. ಸಂಬಂಧಪಟ್ಟ ಸಹಾಯಕ ಆಯುಕ್ತರು, ತಹಶೀಲ್ದಾರ್ ಅವರಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಅನುಮತಿ ಪಡೆದಿಲ್ಲವಾದರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯಲು ಸಂಘಟಕರಿಗೆ ತಿಳಿಸುವಂತೆ ಕಾವೂರು ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಹಾನಗರಪಾಲಿಕೆ ರಸ್ತೆ ಬದಿ ತೆಗೆದಿಟ್ಟ ಗುಂಡಿಗೆ ಬಿದ್ದು ದಲಿತ ಯುವಕನೊಬ್ಬ ಮೃತಪಟ್ಟಿದ್ದು, ಪರಿಹಾರ ಇನ್ನೂ ಸಿಕ್ಕಿಲ್ಲ. ತಂದೆ, ತಾಯಿ ಅನಾರೋಗ್ಯದಲ್ಲಿದ್ದಾರೆ ಎಂದು ದಲಿತ ಮುಖಂಡ ಎಸ್.ಪಿ.ಆನಂದ ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಮೂಲಕ ಗುರುತಿನ ಚೀಟಿ ಪಡೆದರೆ ದುರ್ಘಟನೆ ನಡೆದಾಗ ಪರಿಹಾರ ಪಡೆಯಲು ಸಾಧ್ಯವಿದೆ. ದಲಿತರಿಗೆ ಅಂಬೇಡ್ಕರ್ ನಿಗಮ, ಸಮಾಜ ಕಲ್ಯಾಣ ಇಲಾಖೆ ಮೂಲಕ ಅನೇಕ ಸವಲತ್ತುಗಳಿದ್ದು ಅದನ್ನು ಪಡೆಯಲು ಮಾಹಿತಿ ಕಾರ್ಯಾಗಾರ ನಡೆಸಲು ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಹನುಮಂತರಾಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News