×
Ad

ಆ. 28: ಮಾದಕ ಮುಕ್ತ ಮಂಗಳೂರು ಜಾಗೃತಿ ಅಭಿಯಾನ ಸಮಾರೋಪ

Update: 2018-08-26 20:25 IST

ಮಂಗಳೂರು, ಆ.26: ಮಂಗಳೂರು ನಗರ ಪೊಲೀಸ್ ಮತ್ತು ವಿಜಯ ಕರ್ನಾಟಕ ವತಿಯಿಂದ ಕಳೆದ ಒಂದು ತಿಂಗಳಿನಿಂದ ನಡೆಸಿಕೊಂಡು ಬರುತ್ತಿರುವ ಮಾದಕ ಮುಕ್ತ ಮಂಗಳೂರು ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭ ಆ. 28ರಂದು ನಗರದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಲಿದೆ.

ಕಳೆದ ಒಂದು ತಿಂಗಳಿನಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರಮುಖ ಕಾಲೇಜುಗಳಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದು, ಈ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆ.28ರಂದು ಬೆಳಗ್ಗೆ 10:30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ, ಡಾ.ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದಾರೆ.

ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನ್ಯಾ. ಕಾಡ್ಲೂರು ಸತ್ಯನಾರಾಯಣಾಚಾರ್ಯ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್., ಮಂಗಳೂರು ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ, ಯೆನೆಪೋಯ ಪರಿಗಣಿಸಲ್ಪಟ್ಟ ವಿದ್ಯಾಲಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಭಾಗವಹಿಸಲಿದ್ದಾರೆ.

ರಶ್ಮಿಕಾ ಮಂದಣ್ಣ ನಗರಕ್ಕೆ: ಸಮಾರೋಪ ಸಮಾರಂಭಕ್ಕೆ ತಾರಾ ಮೆರಗು ನೀಡಲು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಲಿದ್ದಾರೆ.
ಜಾಥಾ: ಸಮಾರೋಪ ಸಮಾರಂಭದ ಮೊದಲು ಮಂಗಳೂರಿನ ಬಂಟ್ಸ್ ಹಾಸ್ಟೇಲ್‌ನಿಂದ ಡಾ.ಟಿ.ಎಂ.ಎ. ಪೈ ಇಂಟರ್ ನ್ಯಾಷನಲ್ ಕನ್ವೇಷನಲ್ ಸೆಂಟರ್‌ವರೆಗೆ ಜಾಥಾ ನಡೆಯಲಿದೆ. ಈ ಜಾಥಾಕ್ಕೆ ಕೋಸ್ಟಲ್ ವುಡ್‌ನ ಸೆಲೆಬ್ರಿಟಿಗಳು ಚಾಲನೆ ನೀಡಿ, ಅವರೂ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಈ ಜಾಥಾದಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಪ್ರಮುಖ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಸರಣಿ ಕಾರ್ಯಕ್ರಮ: ಮಾದಕ ವ್ಯಸನದ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಮತ್ತು ವಿಜಯ ಕರ್ನಾಟಕ ಜಂಟಿಯಾಗಿ ನಗರದ ನಾನಾ ಕಾಲೇಜು, ಮಾಲ್‌ಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು. ಇದರ ಸಮಾರೋಪ ಸಮಾರಂಭ ಆ.28ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News