ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್ ಹತ್ಯೆಗಳಿಗೆ ಸಂಬಂಧವಿದೆ: ಸಿಬಿಐ

Update: 2018-08-26 15:01 GMT

 ಹೊಸದಿಲ್ಲಿ, ಆ.26: ಪುಣೆ ಮೂಲದ ಪ್ರಗತಿಪರ ಚಿಂತಕ ನರೇಂದ್ರ ದಾಬೋಲ್ಕರ್ ಮತ್ತು ಬೆಂಗಳೂರಿನ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಮಧ್ಯೆ ಪರಸ್ಪರ ಸಂಬಂಧವಿರುವುದಾಗಿ ರವಿವಾರ ಕೇಂದ್ರ ತನಿಖಾ ಮಂಡಳಿ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಇದಕ್ಕೆ ಸಂಬಂಧಪಟ್ಟಂತೆ ಪುಣೆಯ ಶಿವಾಜಿನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಸಿಬಿಐ, ಸದ್ಯ ಬಂಧನದಲ್ಲಿರುವ ಸಚಿನ್ ಅಂದುರೆಯ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಮನವಿ ಮಾಡಿದೆ. ಅದರಂತೆ, ಅಂದುರೆಯ ಕಸ್ಟಡಿಯನ್ನು ನ್ಯಾಯಾಲಯವು ಆಗಸ್ಟ್ 30ರ ವರೆಗೆ ವಿಸ್ತರಿಸಿದೆ. ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನ ಸಮಿತಿಯ ಮೂಲಕ ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರಗತಿಪರ ಚಿಂತಕ ದಾಬೋಲ್ಕರ್ (67) ಅವರನ್ನು ಅವರ ನಿವಾಸದ ಸಮೀಪ 2013ರ ಜೂನ್ 20ರಂದು ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಈ ಘಟನೆ ನಡೆದು ಬಹುತೇಕ ನಾಲ್ಕು ವರ್ಷಗಳ ನಂತರ 2017ರ ಸೆಪ್ಟಂಬರ್ 5ರಂದು ಪತ್ರಕರ್ತೆ ಮತ್ತು ಹೋರಾಟಗಾತಿ ಗೌರಿ ಲಂಕೇಶ್ ಅವರನ್ನು ಅವರ ಬೆಂಗಳೂರಿನ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಎರಡು ಹತ್ಯೆಗಳನ್ನು ನಾಲ್ಕು ವರ್ಷಗಳ ಅಂತರದಲ್ಲಿ ನಡೆಸಲಾಗಿದ್ದರೂ ಈ ಎರಡೂ ಪ್ರಕರಣಗಳಲ್ಲಿ ಕೆಲವು ಬಲಪಂಥೀಯ ಹೋರಾಟಗಾರರು ಹಾಗೂ ಸನಾತನ ಸಂಸ್ಥೆ ಹಾಗೂ ಇತರ ಸಂಘಟನೆಗಳ ಸದಸ್ಯರು ಶಾಮೀಲಾಗಿರುವುದು ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸದ್ಯ ಸಿಬಿಐ ತನ್ನ ಅರ್ಜಿಯಲ್ಲಿ ಯಾವುದೇ ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ. ವಿಚಾರಣೆಯ ವೇಳೆ, ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೇ ತನಗೆ 7.65 ಎಂಎಂನ ದೇಶೀಯ ಪಿಸ್ತೂಲನ್ನು ಮತ್ತು ಮೂರು ಬುಲೆಟ್‌ಗಳನ್ನು ನೀಡಿರುವುದಾಗಿ ಅಂದುರೆ ಒಪ್ಪಿಕೊಂಡಿದ್ದಾನೆ. ನಂತರ ಈ ಪಿಸ್ತೂಲನ್ನು 2018ರ ಆಗಸ್ಟ್ 11ರಂದು ತಾನು ತನ್ನ ಬಾವ ಸುಭಮ್ ಸುರಲೆಗೆ ಔರಂಗಾಬಾದ್‌ನಲ್ಲಿ ನೀಡಿರುವುದಾಗಿ ಆತ ತಿಳಿಸಿದ್ದಾನೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಈ ಪಿಸ್ತೂಲನ್ನು ಸುರಲೆ ತನ್ನ ಗೆಳೆಯ ರೋಹಿತ್ ರೆಗಿಗೆ ನೀಡಿದ್ದಾನೆ. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಿಬಿಐ ತಿಳಿಸಿದೆ.

ದಾಬೋಲ್ಕರ್ ಹತ್ಯೆಯಲ್ಲಿ ಅಂದುರೆ ಭಾಗಿಯಾಗಿರುವ ಬಗ್ಗೆ ಪಾಲ್ಗರ್‌ನ ನಾಲಾಸೋಪಾರದಿಂದ ಬಂಧಿತನಾದ ಶರದ್ ಕಲಸ್ಕರ್ ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದ. ಘಟನೆ ನಡೆದ ದಿನ ತಾನು ಮತ್ತು ಅಂದುರೆ ಬೈಕ್‌ನಲ್ಲಿ ತೆರಳಿ ದಾಬೋಲ್ಕರ್‌ಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದ. ಇದೀಗ ಹೊಸ ಮಾಹಿತಿಗಳು ಕೈಗೆ ಸಿಕ್ಕಿರುವ ಕಾರಣ ಸಿಬಿಐ ಕಲಸ್ಕರ್‌ನನ್ನು ತನ್ನ ಸುಪರ್ದಿಗೆ ನೀಡುವಂತೆ ಮನವಿ ಮಾಡಲು ನಿರ್ಧರಿಸಿದೆ. ಸದ್ಯ ಕಲಸ್ಕರ್ ಮಹಾರಾಷ್ಟ್ರ ಎಟಿಎಸ್ ಕಸ್ಟಡಿಯಲ್ಲಿದ್ದು ಈ ವಾರದ ಕೊನೆಯಲ್ಲಿ ಅದರ ಅವಧಿ ಮುಗಿಯಲಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್‌ನ ಎಸ್‌ಐಟಿಯಿಂದ ಬಂಧಿತನಾಗಿರುವ ಇನ್ನೋರ್ವ ಆರೋಪಿಯನ್ನೂ ತನ್ನ ಕಸ್ಟಡಿಗೆ ನೀಡಲು ಸಿಬಿಐ ಮನವಿ ಮಾಡಲಿದೆ. ಜೊತೆಗೆ ಪುಣೆಯಲ್ಲಿ ದಾಬೋಲ್ಕರ್ ಹತ್ಯೆಯಲ್ಲಿ ಬಳಸಲಾಗಿರುವ ಬೈಕನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಶಾಮೀಲಾಗಿರುವ ಆರೋಪಿಗಳು, ಸಚಿನ್ ಅಂದುರೆ ಜೊತೆ ಮತ್ತು ದಾಬೋಲ್ಕರ್ ಹತ್ಯೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News