ಮಹಾರಾಷ್ಟ್ರ ಎಟಿಎಸ್ ಬಂಧಿಸಿರುವ ಗೊಂದಲೆಕರ್ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ: ಸಿಟ್

Update: 2018-08-26 15:04 GMT

ಬೆಂಗಳೂರು,ಆ.26: ಮಹಾರಾಷ್ಟ್ರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದ ಆರೋಪದಲ್ಲಿ ಭಯೋತ್ಪಾದನೆ ನಿಗ್ರಹಪಡೆಯಿಂದ ಬಂಧನಕ್ಕೊಳಗಾಗಿರುವ ಸುಧನ್ವಾ ಗೊಂದಲೆಕರ್, ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಎಸ್‌ಐಟಿ ತಿಳಿಸಿದೆ.

ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಘಟನೆ ನಡೆದ ರಾತ್ರಿಯ ಸಿಸಿಕ್ಯಾಮೆರಾ ದೃಶ್ಯಾವಳಿಗಳನ್ನು ಮರುಪರಿಶೀಲಿಸುತ್ತಿದ್ದು ಅದರಲ್ಲಿ ಗೌರಿ ಹತ್ಯೆಗೂ ನಾಲ್ಕು ಗಂಟೆಗಳ ಮೊದಲು ಆಕೆಯ ನಿವಾಸದ ಸಮೀಪ ವ್ಯಕ್ತಿಯೊಬ್ಬ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿ ಸದ್ಯ ಬಂಧನದಲ್ಲಿರುವ ಗೊಂದಲೆಕರ್‌ನನ್ನೇ ಹೋಲುತ್ತಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯಾವಳಿಯನ್ನು ಉನ್ನತ ಮಟ್ಟದ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಗೊಂದಲೆಕರ್‌ನ ಬಂಧನ ಅವಧಿ ಮುಗಿಯುತ್ತಿದ್ದಂತೆ ಆತನನ್ನು ತನ್ನ ಸುಪರ್ದಿಗೆ ನೀಡುವಂತೆ ಎಸ್‌ಐಟಿ ಮನವಿ ಮಾಡಲಿದೆ. ಗೌರಿ ಲಂಕೇಶ್‌ರನ್ನು ಹತ್ಯೆಗೈಯ್ಯಲು ನಡೆಸಿದ್ದ ಹಿಂದಿನ ಪ್ರಯತ್ನ ವಿಫಲವಾಗಿದ್ದ ಕಾರಣ ಈ ಬಾರಿ ಯಾವುದೇ ತಪ್ಪು ನಡೆಯಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಗೊಂದಲೆಕರ್, ಹತ್ಯೆಗೂ ಮುನ್ನ ಗೌರಿಯ ನಿವಾಸದ ಸಮೀಪ ಸಿದ್ಧತೆಯನ್ನು ವೀಕ್ಷಿಸಲು ಆಗಮಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News