ಅಮಿತ್ ಶಾ ಅವರ ಭದ್ರತಾ ವೆಚ್ಚಗಳನ್ನು ಬಹಿರಂಗಗೊಳಿಸುವಂತಿಲ್ಲ: ಸಿಐಸಿ

Update: 2018-08-26 15:25 GMT

ಹೊಸದಿಲ್ಲಿ,ಆ.26: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಒದಗಿಸಲಾಗಿರುವ ಭದ್ರತೆಯ ವೆಚ್ಚಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂದಿರುವ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ವು,ಮಾಹಿತಿ ಹಕ್ಕು ಕಾಯ್ದೆಯಲ್ಲಿನ ‘ಖಾಸಗಿ ಮಾಹಿತಿ’ ಮತ್ತು ‘ಸುರಕ್ಷತೆ’ಯ ವಿನಾಯಿತಿ ನಿಬಂಧನೆಗಳನ್ನು ಉಲ್ಲೇಖಿಸಿದೆ.

ಶಾ ಅವರು ರಾಜ್ಯಸಭಾ ಸದಸ್ಯರಾಗಿರದಿದ್ದಾಗ,2014,ಜು.5ರಂದು ದೀಪಕ ಜುನೇಜಾ ಅವರು ಆರ್‌ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿ,ಖಾಸಗಿ ವ್ಯಕ್ತಿ ಮತ್ತು ಅಧಿಕಾರಿಗಳಿಗ ಭದ್ರತೆಯನ್ನೊದಗಿಸಲು ಅವಕಾಶ ಕಲ್ಪಿಸಿರುವ ನಿಯಮಗಳ ಬಗ್ಗೆ ಮಾಹಿತಿಗಳನ್ನು ಕೋರಿದ್ದರು. ಸರಕಾರವು ತನ್ನ ವೆಚ್ಚದಲ್ಲಿ ಭದ್ರತೆಯನ್ನು ಒದಗಿಸಿರುವ ಎಲ್ಲ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆಯೂ ಅವರು ಕೋರಿಕೊಂಡಿದ್ದರು.

ಯಾವುದೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಯನ್ನು ಅಪಾಯಕ್ಕೀಡು ಮಾಡುವ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ನೀಡಿರುವ ಆರ್‌ಟಿಐ ಕಾಯ್ದೆಯ ಕಲಂ 8(1)(ಜಿ) ಅನ್ನು ಉಲ್ಲೇಖಿಸಿದ್ದ ಗೃಹ ಸಚಿವಾಲಯವು ಜುನೇಜಾ ಅವರು ಕೋರಿದ್ದ ಮಾಹಿತಿಗಳನ್ನು ಒದಗಿಸಲು ನಿರಾಕರಿಸಿತ್ತು. ಖಾಸಗಿತನವನ್ನು ಉಲ್ಲಂಘಿಸುವ ಮತ್ತು ಯಾವುದೇ ‘ಸಾರ್ವಜನಿಕ ಚಟುವಟಿಕೆ’ಗೆ ಸಂಬಂಧಿಸಿರದ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ನೀಡಿರುವ ಕಲಂ 8(1)(ಜಿ) ಅನ್ನೂ ಅದು ಉಲ್ಲೇಖಿಸಿತ್ತು.

ಇದನ್ನು ಪ್ರಶ್ನಿಸಿ ಜುನೇಜಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಐಸಿ ಈಗ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News