ನಕಲಿ ಸುದ್ದಿ ಪತ್ತೆಹಚ್ಚಲು ಮಕ್ಕಳಿಗೆ ಕಲಿಸುತ್ತಿರುವ ಕಣ್ಣೂರಿನ ಶಾಲೆಗಳು

Update: 2018-08-26 16:00 GMT

ಕಣ್ಣೂರು, ಆ.26: ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿರುವ ಇಂದಿನ ದಿನದಲ್ಲಿ ಅಸಲಿ ಮತ್ತು ನಕಲಿ ಸುದ್ದಿಗಳ ಮಧ್ಯೆ ವ್ಯತ್ಯಾಸವನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿದೆ. ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ವಾಟ್ಸ್‌ಆ್ಯಪ್‌ಗೆ ಭಾರತ ಸರಕಾರ ಅನೇಕ ಬಾರಿ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಹಲವು ಶಾಲೆಗಳು ನಕಲಿ ಸುದ್ದಿಗಳ ವಿರುದ್ಧ ಹೋರಾಡಲು ನಿರ್ಧರಿಸಿವೆ.

ಸದ್ಯ ಕಣ್ಣೂರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇತರ ವಿಷಯಗಳ ಜೊತೆಗೆ ನಕಲಿ ಸುದ್ದಿಗಳನ್ನು ಹೇಗೆ ಪತ್ತೆಹಚ್ಚುವುದು ಎಂಬುದನ್ನೂ ಕಲಿಸಿಕೊಡಲಾಗುತ್ತಿದೆ. ಮಾಧ್ಯಮಗಳ ವರದಿಯ ಪ್ರಕಾರ, ಕಣ್ಣೂರಿನ ಶಾಲೆಗಳಲ್ಲಿ ನಕಲಿ ಸುದ್ದಿಗಳನ್ನು ಪತ್ತೆಹಚ್ಚುವ ಬಗ್ಗೆ ನಲ್ವತ್ತು ನಿಮಿಷಗಳ, ಮಲಯಾಳಂ ಮತ್ತು ಇಂಗ್ಲಿಶ್ ಭಾಷೆಯಲ್ಲಿ ತರಗತಿ ನಡೆಸಲಾಗುತ್ತಿದೆ. ಕಣ್ಣೂರಿನಲ್ಲಿರುವ 600 ಶಾಲೆಗಳ ಪೈಕಿ 150 ಶಾಲೆಗಳಲ್ಲಿ ಇಂಥ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ತರಗತಿಗಳಲ್ಲಿ ನಕಲಿ ವಾಟ್ಸ್‌ಆ್ಯಪ್ ಸಂದೇಶಗಳನ್ನು ಹೇಗೆ ಪತ್ತೆಹಚ್ಚುವುದು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಲೈಡರ್‌ಗಳ ಮೂಲಕ ತೋರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ಸುದ್ದಿಗಳನ್ನು ಮತ್ತು ಎಲ್ಲ ಪ್ರಕೃತಿ ವಿಕೋಪದ ಎಚ್ಚರಿಕೆಗಳನ್ನು ನಂಬದಂತೆ ಮಕ್ಕಳಿಗೆ ತಿಳಿಸಲಾಗುತ್ತದೆ.

ಕಳೆದ ವರ್ಷ ಲಸಿಕೆ ಹಾಕಿಸಿಕೊಳ್ಳುವುದು ಮಕ್ಕಳಿಗೆ ಅಪಾಯಕಾರಿ ಎಂಬ ನಕಲಿ ಸುದ್ದಿ ವೈರಲ್ ಆದ ಪರಿಣಾಮ ಕಣ್ಣೂರು ಜಿಲ್ಲೆಯ 2.4 ಲಕ್ಷ ಮಕ್ಕಳ ಹೆತ್ತವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನಿರಾಕರಿಸಿದ್ದರು. ಈ ಘಟನೆಯ ನಂತರ ನಕಲಿ ಸುದ್ದಿಗಳಿಗೆ ಪಡಿವಾಣ ಹಾಕಲು ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಲು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News