ಆನ್‌ಲೈನ್‌ನಲ್ಲಿ ಎಫ್‌ಐಆರ್‌ಗಳನ್ನು ಸಲ್ಲಿಸಬಹುದೇ?

Update: 2018-08-26 16:16 GMT

ಹೊಸದಿಲ್ಲಿ,ಆ.26: ಜನರು ತಮ್ಮ ಮನೆಗಳಿಂದಲೇ ಆನ್‌ಲೈನ್‌ನಲ್ಲಿ ಪ್ರಥಮ ವರ್ತಮಾನ ವರದಿ ಅಥವಾ ಇ-ಎಫ್‌ಐಆರ್‌ಗಳನ್ನು ಸಲ್ಲಿಸಲು ಅವಕಾಶ ನೀಡಬಹುದೇ ಎಂದು ಗೃಹ ಸಚಿವಾಲಯವು ಕಾನೂನು ಆಯೋಗವನ್ನು ಪ್ರಶ್ನಿಸಿದೆ.

ಸಿಆರ್‌ಪಿಸಿಯ ಕಲಂ 154ರಡಿ ಸಂಜ್ಞೆಯ ಅಪರಾಧಗಳಲ್ಲಿ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಾಗಿದೆ.

ಈ ವಿಷಯವನ್ನು ಪರಿಶೀಲಿಸಿರುವ ಕಾನೂನು ಆಯೋಗವು,ಜನರಿಗೆ ಆನ್‌ಲೈನ್‌ನಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲು ಅವಕಾಶ ನೀಡಲು ಸಿಆರ್‌ಪಿಸಿಗೆ ತಿದ್ದುಪಡಿ ತಂದರೆ ಕೆಲವರು ಇತರರ ವರ್ಚಸ್ಸಿಗೆ ಮಸಿ ಬಳಿಯಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎನ್ನುವುದು ಸಂಭಾವ್ಯ ಪರಿಣಾಮಗಳಲ್ಲೊಂದಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಎಫ್‌ಐಆರ್ ಸಲ್ಲಿಸಲು ಪೊಲೀಸ್ ಠಾಣೆಗಳಿಗೆ ತೆರಳುವುದು ಜನರಿಗೆ ಕಷ್ಟವಾಗುತ್ತದೆ ನಿಜ,ಮನೆಯಿಂದಲೇ ಎಫ್‌ಐಆರ್ ಸಲ್ಲಿಸುವುದು ಸುಲಭವಾಗುತ್ತದೆ. ಆದರೆ ಹೆಚ್ಚಿನವರಿಗೆ ಪೊಲೀಸರೆದುರು ಸುಳ್ಳು ಹೇೆಳುವುದು ಕಷ್ಟವಾಗುತ್ತದೆ. ಪೊಲೀಸರಿಗೆ ದೂರುದಾರನ ವರ್ತನೆ ಅರ್ಥವಾಗುತ್ತದೆ. ಆದರೆ ಯಾರಾದರೂ ಇತರರ ಹೆಸರಿಗೆ ಮಸಿ ಬಳಿಯಲು ಆನ್‌ಲೈನ್ ಸೌಲಭ್ಯವನ್ನು ದುರುಪಯೋಗಿಸಬಹುದು. ನಮಗೆ ಈವರೆಗೆ ಇಷ್ಟು ಅರ್ಥವಾಗಿದೆ. ಆದರೆ ಪರಿಕಲ್ಪನೆಯನ್ನು ತಿಳಿದುಕೊಳ್ಳಲು ನಾವು ಈಗಷ್ಟೇ ಆರಂಭಿಸಿದ್ದೇವೆ. ಹೀಗಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಎಫ್‌ಐಆರ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಎಂದು ಆಯೋಗವು ಶಿಫಾರಸು ಮಾಡಿದರೆ ಅದರ ದುರುಪಯೋಗವನ್ನು ತಡೆಯಲು ಕ್ರಮಗಳನ್ನೂ ಸೂಚಿಸಬೇಕಾಗುತ್ತದೆ ಎಂದು ಮಾಜಿ ಕಾನೂನು ಕಾರ್ಯದರ್ಶಿಯೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News