ಏಕಕಾಲದಲ್ಲಿ ಲೋಕಸಭೆ, ವಿಧಾನ ಸಭೆ ಚುನಾವಣೆ ಪ್ರಜಾಪ್ರಭುತ್ವದ ಆರೋಗ್ಯದ ಸಂಕೇತ: ಪ್ರಧಾನಿ

Update: 2018-08-26 16:31 GMT

ಹೊಸದಿಲ್ಲಿ, ಆ. 26: ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಕುರಿತ ಚರ್ಚೆಯನ್ನು ಪ್ರಜಾಪ್ರಭುತ್ವದ ಆರೋಗ್ಯದ ಸಂಕೇತ ಎಂದು ವಿವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ರಾಷ್ಟ್ರದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡುವ ಗೌರವ ಎಂದಿದ್ದಾರೆ.

ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಸಬೇಕು. ಸರಕಾರ ಹಾಗೂ ಪ್ರತಿಪಕ್ಷ ತಮ್ಮ ನಿಲುವು ವ್ಯಕ್ತಪಡಿಸಿವೆ. ಇದು ಉತ್ತಮ ಬೆಳವಣಿಗೆ ಹಾಗೂ ಪ್ರಜಾಪ್ರಭುತ್ವದ ಆರೋಗ್ಯದ ಸಂಕೇತ ಎಂದು ಅವರು ಹೇಳಿದ್ದಾರೆ. ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಆರೋಗ್ಯಯುತ ಸಂಪ್ರದಾಯ ಅಭಿವೃದ್ಧಿಪಡಿಸುವುದು, ಪ್ರಜಾಪ್ರಭುತ್ವ ಸಬಲಗೊಳಿಸಲು ನಿರಂತರ ಪ್ರಯತ್ನಿಸುವುದು, ಮುಕ್ತವಾಗಿ ಚರ್ಚಿಸುವುದನ್ನು ಅಟಲ್‌ಜಿ ಅವರಿಗೆ ನೀಡುವ ಸೂಕ್ತ ಗೌರವ ಎಂದು ನಾನು ಹೇಳುತ್ತೇನೆ ಎಂದು ಮೋದಿ ತಿಂಗಳ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ. ಎನ್‌ಡಿಎ ಪಾಲುದಾರರಾದ ಶಿರೋಮಣಿ ಅಕಾಲಿ ದಳ, ಎಐಎಡಿಎಂಕೆ, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕಾಂಗ್ರೆಸ್, ತೃಣ ಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ತೆಲುಗು ದೇಶಂ ಪಕ್ಷ, ಎಡ ಪಕ್ಷಗಳು ಹಾಗೂ ಜೆಡಿಎಸ್ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News