ಅಕಾಲಿ ನಾಯಕ ಮನ್‌ಜಿತ್‌ಸಿಂಗ್ ಮೇಲೆ ಖಲಿಸ್ತಾನ ಬೆಂಬಲಿಗರಿಂದ ಹಲ್ಲೆ: ಕ್ಯಾಲಿಫೋರ್ನಿಯಾ

Update: 2018-08-26 17:45 GMT

ಹೊಸದಿಲ್ಲಿ,ಆ.26: ಶಿರೋಮಣಿ ಅಕಾಲಿದಳ ನಾಯಕ ಮನ್‌ಜಿತ್‌ಸಿಂಗ್ ಅವರ ಮೇಲೆ ಅಮೆರಿಕದ ಕ್ಯಾಲಿಫೋರ್ನಿಯಾ ನಗರದಲ್ಲಿ ಖಲಿಸ್ತಾನ ಬೆಂಬಲಿಗರ ಗುಂಪೊಂದು ಬರ್ಬರವಾಗಿ ದಾಳಿ ನಡೆಸಿದೆ. ಇದಕ್ಕೂ ಮುನ್ನ ಮನ್‌ಜಿತ್ ಸಿಂಗ್, ನ್ಯೂಯಾರ್ಕ್‌ನಲ್ಲಿಯೂ ಸಿಖ್ಖ್ ಪ್ರತಿಭಟನಕಾರರ ಗುಂಪೊಂದರಿಂದ ಹಲ್ಲೆಗೀಡಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಮನ್‌ಜಿತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮನ್‌ಜಿತ್ ಸಿಂಗ್ ಅವರು ದಿಲ್ಲಿ ಸಿಖ್ಖ್‌ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.

ಕ್ಯಾಲಿಫೋರ್ನಿಯಾ ಘಟನೆಗೆ ಸಂಬಂಧಿಸಿ, ಸುದ್ದಿಸಂಸ್ಥೆಯೊಂದು ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಖಲಿಸ್ತಾನ್ ಬೆಂಬಲಿಗರು ಸಿಂಗ್ ಅವರನ್ನು ದೂಡಲು ಯತ್ನಿಸಿದ್ದಾರೆ ಹಾಗೂ ಅವರ ಮುಖಕ್ಕೆ ಥಳಿಸಿರುವುದು ಕಂಡುಬಂದಿದೆ. ಆನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಕಾಲಿದಳ ನಾಯಕನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಘಟನೆಯ ಬಳಿಕ ಮನ್‌ಜಿತ್ ಸಿಂಗ್ ಹೇಳಿಕೆಯೊಂದನ್ನು ನೀಡಿ, ‘‘ನನಗೆ ಘಾಸಿಯಾಗಿದೆ. ಪ್ರತಿಭಟನಕಾರರು ನನ್ನನ್ನು ಬರ್ಬರವಾಗಿ ಥಳಿಸಿದ್ದಾರೆ. ಇದೊಂದು ಮಾರಣಾಂತಿಕ ದಾಳಿಯಾಗಿದೆ’’ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಗುರುನಾನಕ್ ಅವರ 550ನೇ ಜನ್ಮದಿನಾಚರಣೆಗೆ ಸಂಬಂಧಿಸಿ ಅಮೆರಿಕದ ಸಿಖ್ಖ್ ಸಮುದಾಯದ ಜೊತೆ ಚರ್ಚಿಸಲು ಮನ್‌ಜಿತ್‌ಸಿಂಗ್ ಅಮೆರಿಕಕ್ಕೆ ಆಗಮಿಸಿದ್ದರು. ಮೊದಲು ನ್ಯೂಯಾಕ್‌‰ಗೆ ಭೇಟಿ ನೀಡಿದ ಆನಂತರ ಅವರು ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಿದ್ದರು. ಇಂತಹ ದಾಳಿಗೆ ತಾವು ಹೆದರಲಾರೆವೆಂದು ಹೇಳಿದ ಅವರು, ಖಲಿಸ್ತಾನಕ್ಕಾಗಿ ಆಗ್ರಹಿಸುವವರು ತಮ್ಮ ಹೋರಾಟವ್ನ ಮುಂದುವರಿಸುವುದು. ಆದರೆ ಅದಕ್ಕೆ ಹಿಂಸಾಚಾರ ಉತ್ತರವಲ್ಲವೆಂದರು. ಆದರೆ ತಾವು ಖಲಿಸ್ತಾನ ಚಳವಳಿಯ ಹೋರಾಟದ ಭಾಗವಾಗುವುದಿಲ್ಲವೆಂದು ಮನ್‌ಜಿತ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News