ವಾಯುದಾಳಿಗೆ ಅಫ್ಘಾನ್ ಐಸಿಸ್ ವರಿಷ್ಠ ಬಲಿ?

Update: 2018-08-26 17:46 GMT

ಕಾಬೂಲ್, ಆ.26: ಅಫ್ಘಾನಿಸ್ತಾನದಲ್ಲಿ ಐಸಿಸ್‌ನ ವರಿಷ್ಠನೆನ್ನಲಾದ ಅಬು ಸಾದ್ ಎರ್‌ಹಾಬಿ, ಶನಿವಾರ ರಾತ್ರಿ ನಂಗರ್‌ಹಾರ್ ಪ್ರಾಂತದಲ್ಲಿ ಅಫ್ಘಾನ್ ಹಾಗೂ ವಿದೇಶಿ ಪಡೆಗಳು ಶಂಕಿತ ಉಗ್ರರ ಅಡಗುದಾಣದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿದ್ದಾನೆಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

 ಈ ದಾಳಿಯಲ್ಲಿ ಐಸಿಸ್ ಉಗ್ರರೆನ್ನಲಾದ ಇತರ 10 ಮಂದಿ ಕೂಡಾ ಸಾವನ್ನಪ್ಪಿದ್ದಾರೆಂದು ಕಾಬೂಲ್‌ನ ಭದ್ರತಾ ನಿರ್ದೇಶನಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ನಂಗರ್‌ಹಾರ್ ಪ್ರಾಂತದಲ್ಲಿ ಐಸಿಸ್‌ನ ಎರಡು ಅಡಗುದಾಣಗಳ ಮೇಲೆ ನಡೆಸಿದ ದಾಳಿಯಲ್ಲಿ ಬಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆಯೆಂದು ಅದು ಹೇಳಿದೆ.

ಆದರೆ ಅಬು ಸಾದ್ ಎರ್‌ಹಾಬಿ ವಾಯುದಾಳಿಯಲ್ಲಿ ಮೃತಪಟ್ಟಿದ್ದಾನೆಂಬ ವರದಿಗಳ ಬಗ್ಗೆ ಐಸಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಫ್ಘಾನ್‌ನಲ್ಲಿ ಸರಕಾರಿ ಪಡೆಗಳಿಗೆ ತರಬೇತಿ ಹಾಗೂ ನೆರವು ನೀಡುತ್ತಿರುವ ನ್ಯಾಟೊ ಕೂಡಾ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News