ಸುಬ್ರಮಣಿಯನ್ ಸ್ವಾಮಿ ಹೇಳಿಕೆಯಿಂದ ದೂರ ಸರಿದ ಕೇಂದ್ರ

Update: 2018-08-26 18:11 GMT

ಹೊಸದಿಲ್ಲಿ, ಆ.26: ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವ್ಯವಹಾರ ನಡೆದರೆ ದ್ವೀಪರಾಷ್ಟ್ರದ ಮೇಲೆ ಭಾರತ ಆಕ್ರಮಣ ಮಾಡಬೇಕು ಎಂಬ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯ ಹೇಳಿಕೆಯಿಂದ ಪಕ್ಷವು ದೂರು ಸರಿದಿದೆ. ಮಾಲ್ಡೀವ್ಸ್‌ನ ದೇಶಭ್ರಷ್ಟಗೊಂಡ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಅವರನ್ನು ಕೊಲಂಬೊದಲ್ಲಿ ಭೇಟಿ ಮಾಡಿದ ಎರಡು ದಿನಗಳ ನಂತರ ಸ್ವಾಮಿ ಈ ಹೇಳಿಕೆಯನ್ನು ನೀಡಿದ್ದಾರೆ.

ಸ್ವಾಮಿಯ ಹೇಳಿಕೆ ಬಗ್ಗೆ ಪಕ್ಷದ ನಿಲುವನ್ನು ಬಯಸಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಡಾ. ಸ್ವಾಮಿ ಟ್ವೀಟ್ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕವಾಗಿದ್ದು ಭಾರತ ಸರಕಾರದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಂಗಳವಾರದಂದು ಮಾಲ್ಡೀವ್ಸ್ ನಾಯ ನಶೀದ್‌ರನ್ನು ಭೇಟಿಯಾದ ಸ್ವಾಮಿಗೆ ಮಾಜಿ ಅಧ್ಯಕ್ಷರು ತಮ್ಮ ದೇಶದ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು. ಜೊತೆಗೆ ಸೆಪ್ಟಂಬರ್ 23ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವ್ಯವಹಾರ ನಡೆಸುವ ಸಾಧ್ಯತೆಗಳ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಬಂಧನದಲ್ಲಿರುವ ವಿರೋಧ ಪಕ್ಷದ ನಾಯಕರನ್ನು ಬಿಡುಗಡೆಗೊಳಿಸುವಂತೆ ಮಾಲ್ಡೀವ್ಸ್‌ನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ಯಮೀನ್ ದ್ವೀಪ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ನಂತರ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧದಲ್ಲಿ ಬಿರುಕು ಮೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News