ಸಾಮಾಜಿಕ ಪಿಡುಗುಗಳನ್ನು ಎದುರಿಸಲು ರಾಜಕೀಯ ಇಚ್ಛೆ ಮತ್ತು ಆಡಳಿತ ಕೌಶಲ್ಯ ಅಗತ್ಯ: ನಾಯ್ಡು

Update: 2018-08-27 15:21 GMT

ಹೊಸದಿಲ್ಲಿ,ಆ.27: ಸಾಮಾಜಿಕ ಪಿಡುಗುಗಳನ್ನು ತಡೆಯಲು ಹೊಸ ಕಾನೂನಿಗಿಂತ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಕೌಶಲ್ಯಗಳು ಹೆಚ್ಚು ಮುಖ್ಯವಾಗಿವೆ. ಕೇವಲ ಕಾನೂನು ರಚನೆಯಿಂದ ಅಪರಾಧವನ್ನು ನಿಲ್ಲಿಸಲು ಅಥವಾ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ ಇಲ್ಲಿ ಹೇಳಿದರು.

ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ(ಬಿಪಿಆರ್‌ಡಿ)ದ 48ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣವನ್ನು ಮಾಡಿದ ಅವರು,ಏನೇ ಸಂಭವಿಸಿದರೂ ಹೊಸ ಕಾನೂನು ತರಲು ನಾವು ಆಗ್ರಹಿಸುತ್ತೇವೆ ಮತ್ತು ಅದು ನಮ್ಮ ದೌರ್ಬಲ್ಯವಾಗಿದೆ. ಹೊಸ ಕಾನೂನು ಎಲ್ಲ ಅಪರಾಧಗಳನ್ನೂ ತಡೆಯುತ್ತದೆಯೇ ಎಂದು ಪ್ರಶ್ನಿಸಿದರು.

ಅಪರಾಧಗಳ ತಡೆಗೆ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ಇತ್ತೀಚಿಗೆ ಕಾನೂನಿನಲ್ಲಿಯ ತಿದ್ದುಪಡಿಗಳು ಮತ್ತು ಹೊಸ ಕಾನೂನುಗಳನ್ನು ಪ್ರಸ್ತಾಪಿಸಿದ ಅವರು,ಹೊಸ ಕಾನೂನೊಂದೇ ಸಾಕಾಗುವುದಿಲ್ಲ ಎಂದು ತಾನು ಹಿಂದೆಯೂ ಹೇಳಿದ್ದೇನೆ. ಅದರೊಂದಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಕೌಶಲ್ಯಗಳು ಹೆಚ್ಚು ಅಗತ್ಯವಾಗಿವೆ. ಎಷ್ಟೇ ಕಾನೂನುಗಳನ್ನು ಮಾಡಿದರೂ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ. ಅವು ಬೇಕು,ತಾನದನ್ನು ನಿರಾಕರಿಸುವುದಿಲ್ಲ ಎಂದರು.

ಕೇಂದ್ರದ ನೋಟು ನಿಷೇಧ ಮತ್ತು ಜನಧನ ಖಾತೆಗಳ ಆರಂಭ ಕ್ರಮಗಳನ್ನು ಪ್ರಶಂಸಿಸಿದ ಅವರು,ನೋಟು ನಿಷೇಧದಿಂದಾಗಿ ಎಲ್ಲ ಕಪ್ಪುಹಣವೂ ಬ್ಯಾಂಕುಗಳಲ್ಲಿ ಜಮೆಯಾಗಿವೆ ಮತ್ತು ವ್ಯವಸ್ಥೆಯಲ್ಲಿ ಸೇರಿದೆ. ಯಾವುದು ಕಪ್ಪು ಮತ್ತು ಯಾವುದು ಬಿಳಿ ಎನ್ನುವುದನ್ನು ಪತ್ತೆ ಹಚ್ಚುವುದು ಈಗ ಆರ್‌ಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಕೆಲಸವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News