×
Ad

ಬಿಗಿ ಭದ್ರತ್ರೆಯಲ್ಲಿ ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬನ್ನಂಜೆ ರಾಜಾ

Update: 2018-08-27 21:06 IST

ಉಡುಪಿ, ಆ.27: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅನುಮತಿಯಂತೆ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆ ತಂದಿರುವ ಪೊಲೀಸರು, ಇಂದು ಕಲ್ಮಾಡಿಯ ಮನೆ ಹಾಗೂ ಮಲ್ಪೆಯ ರುದ್ರಭೂಮಿಯಲ್ಲಿ ನಡೆದ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದರು.

ಆ. 25ರಂದು ಕಲ್ಮಾಡಿ ಸಮೀಪದ ಮನೆಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ, ಆ. 26ರಂದು ವಕೀಲ ಶಾಂತಾರಾಮ್ ಶೆಟ್ಟಿ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದು ಅದರಂತೆ ಪೊಲೀಸರು ಬಿಗಿ ಭದ್ರತೆಯಲ್ಲಿ ಬನ್ನಂಜೆ ರಾಜನನ್ನು ಬೆಳಗಾವಿ ಜೈಲಿನಿಂದ ಮಧ್ಯರಾತ್ರಿ ವೇಳೆ ಉಡುಪಿಗೆ ಕರೆ ತಂದು, ನಗರ ಠಾಣೆಯ ಲಾಕಪ್‌ನಲ್ಲಿ ಇರಿಸಿದ್ದರು.

ಇಂದು ಬೆಳಗ್ಗೆ ಬನ್ನಂಜೆ ರಾಜನನ್ನು ಕಲ್ಮಾಡಿಯ ಮನೆಗೆ ಕರೆದೊಯ್ದ ಪೊಲೀಸರು ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಮನೆಯಲ್ಲಿ ತಾಯಿಯ ಪಾರ್ಥಿವ ಶರೀರದ ದರ್ಶನ ಪಡೆದ ಬನ್ನಂಜೆ ರಾಜ, ಮಧ್ಯಾಹ್ನ ವೇಳೆ ಮಲ್ಪೆ ಬೀಚ್ ಬಳಿಯ ರುದ್ರಭೂಮಿಯಲ್ಲಿ ಸಹೋದರ ಅರುಣ್ ಜೊತೆ ಸೇರಿ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸಂದರ್ಭ ತಂದೆ ಸುಂದರ್ ಹಾಗೂ ಕುಟುಂಬದವರು ಹಾಜರಿದ್ದರು.

ಈ ಎಲ್ಲ ಕಡೆ ಬನ್ನಂಜೆ ರಾಜನನ್ನು ಪೊಲೀಸರು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೋದರು. ರುದ್ರಭೂಮಿಯಿಂದ ರಾಜಾನನ್ನು ಮನೆಗೆ ಕರೆ ದೊಯ್ದು, ಸಂಜೆ ವೇಳೆ ಬಿಗಿ ಭದ್ರತೆಯಲ್ಲಿ ನಗರ ಠಾಣೆಗೆ ಕರೆ ತರಲಾಯಿತು. ಮನೆಯಲ್ಲಿ ಬನ್ನಂಜೆ ರಾಜಾನ ಪತ್ನಿ ಸೋನಂ ಕೂಡ ಇದ್ದರು. ಇಂದು ರಾತ್ರಿ ಪೂರ್ತಿ ಲಾಕಪ್‌ನಲ್ಲಿ ಉಳಿದುಕೊಳ್ಳಲಿರುವ ಬನ್ನಂಜೆ ರಾಜಾನನ್ನು ಪೊಲೀಸರು, ಆ. 28ರಂದು ಬೆಳಗ್ಗೆ ಬೆಳಗಾವಿ ಜೈಲಿಗೆ ಕರೆದೊಯ್ಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News