×
Ad

ಪೊಲೀಸ್ ವಶದಲ್ಲಿದ್ದ ಶಿರೂರು ಮೂಲ ಮಠ ಹಸ್ತಾಂತರ

Update: 2018-08-27 21:13 IST

ಉಡುಪಿ, ಆ. 27: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಉದ್ದೇಶದಿಂದ ತಿಂಗಳುಗಳ ಕಾಲ ಪೊಲೀಸರ ವಶದಲ್ಲಿದ್ದ ಶಿರೂರು ಮೂಲ ಮಠವನ್ನು ಇಂದು ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರಿಸಲಾಯಿತು.

ಸ್ವಾಮೀಜಿಯ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ತನಿಖೆಯ ಉದ್ದೇಶದಿಂದ ಪೊಲೀಸರು ಹಿರಿಯಡ್ಕದಲ್ಲಿರುವ ಶಿರೂರು ಮೂಲಮಠವನ್ನು ಆ. 20 ರಿಂದ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಸ್ವಾಮೀಜಿ ತಂಗಿದ್ದ ಮಠದ ಮೇಲಿನ ಕೋಣೆ, ಅಡುಗೆ ಕೋಣೆಗಳಿಗೆ ಪೊಲೀಸರು ಬೀಗ ಜಡಿದಿದ್ದರು. ಅಲ್ಲದೆ ಮಠದ ಒಳಗೆ ಹಾಗೂ ಹೊರಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಇದೀಗ ಸ್ವಾಮೀಜಿ ಸಾವಿಗೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು, ಶಿರೂರು ಮೂಲ ಮಠದ ಕೋಣೆಗಳ ಬೀಗದ ಕೀಯನ್ನು ಇಂದು ಮಠದ ಮೆನೇಜರ್ ಸುಬ್ರಹ್ಮಣ್ಯ ಭಟ್ ಅವರಿಗೆ ಹಸ್ತಾಂತರಿಸಿದರು. ಅಲ್ಲದೆ ಮಠಕ್ಕೆ ಒದಗಿಸಲಾದ ನಾಲ್ಕು ಪೊಲೀಸ್ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಳ್ಳಲಾಗಿದೆ.

ಇನ್ನು ಮುಂದೆ ಶಿರೂರು ಮೂಲಮಠದ ಜವಾಬ್ದಾರಿಯನ್ನು ಸೋದೆ ಮಠಕ್ಕೆ ವಹಿಸಿಕೊಡಲಾಗಿದೆ. ಈ ಹಸ್ತಾಂತರ ಪ್ರಕ್ರಿಯೆಯ ಸಂದರ್ಭ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಜರಿದ್ದರು. ಉಡುಪಿಯಲ್ಲಿರುವ ಶಿರೂರು ಮಠವನ್ನು ಪೊಲೀಸರು ಆ.13ರಂದು ಸೋದೆ ಮಠಕ್ಕೆ ಒಪ್ಪಿಸಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಸ್ವಾಮೀಜಿಯ ಕಾರನ್ನು ಕೂಡ ಸಂಬಂಧಪಟ್ಟವರಿಗೆ ನೀಡಲಾಗಿತ್ತು.

‘ಈ ಹಿಂದೆ ಉಡುಪಿ ಶಿರೂರು ಮಠ ಹಾಗೂ ಇಂದು ಹಿರಿಯಡ್ಕದಲ್ಲಿರುವ ಮೂಲಮಠವನ್ನು ಪೊಲೀಸರು ಸೋದೆ ಮಠಕ್ಕೆ ಒಪ್ಪಿಸಿದ್ದು, ಪೊಲೀಸರು ಕೋಣೆ ಗಳಿಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಲಾಗಿದೆ. ಮುಂದೆ ಶಿರೂರು ಸ್ವಾಮೀಜಿಯ ಆರಾಧನೆಯನ್ನು ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸೋದೆ ಮಠದವರು ತಿಳಿದ್ದಾರೆ.

ತನಿಖೆಗಾಗಿ ನಮ್ಮ ಸುಪರ್ದಿಗೆ ತೆಗೆದುಕೊಂಡ ಶಿರೂರು ಮೂಲಮಠವನ್ನು ಇಂದು ಸೋದೆ ಮಠಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆ ಮುಂದು ವರೆದಿದ್ದು, ಅಂತಿಮ ವರದಿಯನ್ನು ಕೆಎಂಸಿ ವೈದ್ಯರು ಇನ್ನಷ್ಟೆ ನೀಡಬೇಕಾಗಿದೆ.

-ಲಕ್ಷ್ಮಣ್ ಬಿ.ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News