×
Ad

ತುಳುವೇಶ್ವರ ತುಳುನಾಡಿನ ಪ್ರತೀಕ: ಡಾ.ಎ.ಪ್ರಸಾದ್ ರಾವ್

Update: 2018-08-27 21:19 IST

ಉಡುಪಿ, ಆ.27: ಒಂದು ಊರನ್ನು ಆ ಊರಿನ ದೇವಾಲಯ ಅಥವಾ ಆ ಊರಿನ ದೇವರ ಹೆಸರಲ್ಲಿ ಕರೆಯುವುದು ಸಾಮಾನ್ಯ. ಹಾಗಿರುವಾಗ ತುಳುವೇಶ್ವರನಿಂದ ತುಳುನಾಡಾಗಿರಬಹುದು. ಅದುದರಿಂದ ತುಳುವೇಶ್ವರನು ತುಳುನಾಡಿನ ಪ್ರತೀಕವಾಗಿದ್ದಾನೆ ಎಂದು ಡಾ.ಆರೂರು ಪ್ರಸಾದ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಬಸ್ರೂರಿನಲ್ಲಿ ನಡೆಯಲಿರುವ ‘ತುಳುನಾಡೋಚ್ಚಯ- 2018’ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಭೆಗೆ ಚಾಲನೆ ನೀಡಿ ಮಾತನಾಡಿದ ಬಸ್ರೂರು ಅಪ್ಪಣ್ಣ ಹೆಗ್ಡೆ, ತುಳು ಹಲವು ಶತಮಾನಗಳ ಹಿಂದಿನ ಭಾಷೆ, ಜಗತ್ತಿನಲ್ಲಿ ಕರಾವಳಿಗರನ್ನು ಗುರುತಿಸುವ ಸಂಪರ್ಕ ಭಾಷೆ ತುಳು. ತುಳುನಾಡಿನ ನಾವು ಮಹಾ ಸಾಧಕರು, ಧೈರ್ಯಶಾಲಿ ಗಳು. ಅದರೆ ಇಂದು ಮೀಸಲಾತಿಯಿಂದ ನಮ್ಮ ಅಭಿವೃದ್ದಿ ಕುಂಠಿತವಾಗಿದೆ. ಜನರು ಮೀಸಲಾತಿಗಾಗಿ ತಮ್ಮ ಶಕ್ತಿ-ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಹಿಂದೆ ನಮ್ಮ ಬಂಟ ಸಮುದಾಯ ಮೀಸಲಾತಿಗಾಗಿ ಒತ್ತಾಯಿಸಿದಾಗ ಇದರ ದುಷ್ಪರಿಣಾಮವನ್ನರಿತ ನಮ್ಮ ಹಿರಿಯರು ಅದಕ್ಕೆ ಸಮ್ಮತಿಸಿರಲಿಲ್ಲ. ಅದುದ ರಿಂದಲೇ ಬಂಟ ಸಮಾಜ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.

ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಮಾತನಾಡಿ, ತುಳುಭಾಷೆ, ನಾಡು, ಸಂಸ್ಕೃತಿಗೆ ಅದ್ಭುತ ಶಕ್ತಿಯಿದೆ. ನಾವು ಎಷ್ಟೇ ಉನ್ನತ ಮಟ್ಟಕ್ಕೆ ಏರಿದರೂ ಅದರ ಕಾಂತೀಯ ವಲಯ ನಮ್ಮನ್ನು ಆಕರ್ಷಿಸುತ್ತದೆ ಎಂದರು.

ಡಿಸೆಂಬರ್ ತಿಂಗಳ ಕೊನೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ಸಭೆ ತೀರ್ಮಾನಿಸಿತು. ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆಯ ನಿಟ್ಟಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಕನ್ನಡ, ತುಳು, ಕುಂದಗನ್ನಡ, ಕೊಂಕಣಿ, ಮರಾಠಿ, ಹವ್ಯಕ, ಶಿವಳ್ಳಿ, ಮಲೆಯಾಳ, ಮಾವಿಲ, ಉರ್ದು, ಬೈರಕನ್ನಡ, ಕರ್ಹಾಡ, ಅರೆಗನ್ನಡ, ಕೊಡವ, ಕೊರಗ ಮತ್ತು ಬ್ಯಾರಿ ಭಾಷೆಗಳ ಸಾಹಿತ್ಯ, ಸಾಂಸ್ಕೃತಿಕ, ಜನಪದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಮುಂದಿನ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಎಲ್ಲಾ ಸಮುದಾಯ ಮತ್ತು ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಸೆ.16ರಂದು ರವಿವಾರ ಸಂಜೆ 3ಗಂಟೆಗೆ ಬಸ್ರೂರಿನ ನಿವೇದಿತಾ ಪ್ರೌಢಶಾಲೆಯ ವಿಶಾಲಾಕ್ಷಿ ಪೂಂಜ ಸಭಾ ಭವದಲ್ಲಿ ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮದ್ರಾಡಿ ಶ್ರೀಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮೋಹನ್ ಸ್ವಾಮೀಜಿ, ಕುಂದಾಪುರ ತಾಪಂ ಸದಸ್ಯ ರಾಮಕಿಶನ್ ಹೆಗಡೆ ಬಸ್ರೂರು, ಅಖಿ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಮಮತ ರಾಮಕಿಶನ್ ಹೆಗಡೆ, ಒಡಿಪು ತುಳು ಕೂಟದ ತಾರಾ ಆಚಾರ್ಯ, ಕುಡ್ಲ ತುಳು ಪತ್ರಿಕೆಯ ಯಶೋದಾ ಕೇಶವ್, ಸರ್ಗ ಯಶವಂತ್, ಪುರುಷೋತ್ತಮ ಬಲ್ಯಾಯ, ನಮ ತುಳುವೆರ್ ಸಂಘಟನೆಯ ಸುಕುಮಾರ್ ಮೋಹನ್, ರಾಮಪ್ರಸಾದ್ ಭಟ್, ತುಳುವೆರೆ ಆಯನೊ ಕೂಟ ಕುಡ್ಲದ ಆಶಾ ಶೆಟ್ಟಿ ಆತ್ತಾವರ, ಹರೀಶ್ ಶೆಟ್ಟಿ ಫಣಿಯೂರು, ವಿಜಯಕುಮಾರ್ ಶೆಟ್ಟಿ ಬೈಂದೂರು, ಚಂದ್ರಿಕಾ ಶೆಟ್ಟಿ, ವಿನಯ ಮಲ್ಲಿ, ಎ. ರಾಜಾರಾಮ್ ರಾವ್, ದಿನೇಶ್ ಕಿಣಿ, ಮಹೇಶ್ ಕಿಣಿ, ನಾಗರಾಜ್ ಕುದ್ರೊಳಿ, ಪೃಥ್ವಿರಾಜ್ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

ನಿವೇದಿತಾ ಪ್ರೌಢಶಾಲೆಯ ಪ್ರಾಧ್ಯಾಪಕ ದಿನಕರ ಶೆಟ್ಟಿ ಸ್ವಾಗತಿಸಿ ತುಳುವೆರೆ ಆಯನೊ ಕೂಟ ಕುಡ್ಲದ ಕಾರ್ಯದರ್ಶಿ ಪ್ರಸಾದ್ ಎಸ್. ಕೊಂಚಾಡಿ ವಂದಿಸಿದರು. ವಿಶ್ವ ತುಳುವೆರೆ ಆಯನೊ ಕೂಟದ ಪ್ರಧಾನ ಸಂಚಾಲಕ ಡಾ. ರಾಜೇಶ್ ಆಳ್ವ ಬದಿಯಡ್ಕ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News