ಭಯೋತ್ಪಾದನೆ ಇಂದು ವಿಶ್ವದ ಪ್ರಧಾನ ಶತ್ರು: ಎಂ.ಜೆ.ಅಕ್ಬರ್

Update: 2018-08-27 15:57 GMT

ಮಣಿಪಾಲ, ಆ.27: ಮಾಹೆಯ ಡಿಪಾರ್ಟ್‌ಮೆಂಟ್ ಆಫ್ ಜಿಯೋ ಪೊಲಿಟಿಕ್ಸ್ ಆ್ಯಂಡ್ ಇಂಟರ್‌ನೇಷನಲ್ ರಿಲೇಷನ್ಸ್ ವಿಭಾಗದ ವತಿಯಿಂದ ಪ್ರಾರಂಭಗೊಂಡ ‘ಚೀನಾ ಅಧ್ಯಯನ ಕೇಂದ್ರ’ ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಇಂದು ಮಣಿಪಾಲದ ವಿವಿ ಬಿಲ್ಡಿಂಗ್‌ನಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ವಿಶ್ವ ಶಾಂತಿಗೆ ಎದುರಾಗಿರುವ ಪ್ರಧಾನ ಬೆದರಿಕೆ ಭಯೋತ್ಪಾದನೆಯಾಗಿದೆ. ಭಯೋತ್ಪಾದನೆ ಯಿಂದ ಕೇವಲ ಹಿಂಸೆಗಳು ಮಾತ್ರ ಮಾನವ ಕುಲವನ್ನು ಕಂಗೆಡಿಸುವುದಲ್ಲ. ಭಯೋತ್ಪಾದನೆ ಎಂಬುದು ಒಗ್ಗಟ್ಟು, ದೇಶದ ಹಾಗೂ ಸಮಾಜದ ಸೌಹಾರ್ದತೆ, ಬಹುತ್ವವನ್ನು ಛಿದ್ರಗೊಳಿಸುವುದಲ್ಲದೇ, ಶಾಂತಿಯನ್ನು ನಾಶಪಡಿಸುತ್ತದೆ ಎಂದವರು ನುಡಿದರು.

ಇಂದು ವಿಶ್ವದಾದ್ಯಂತ ಭಾರತೀಯ ಶಿಕ್ಷಣ ಪದ್ಧತಿಯ ಕುರಿತಂತೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಭಾರತೀಯ ಶಿಕ್ಷಣಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಶಿಕ್ಷಣರಂಗದಲ್ಲಿ ಭಾರತದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗುತ್ತಿದೆ. ಇದಕ್ಕೆ ನಮ್ಮ ಶಿಕ್ಷಣ ಪದ್ಧತಿ ಎಂಬುದು ಯಾವುದೇ ಸಿದ್ಧಾಂತದ ಉಪ್ಪು ಮತ್ತು ಸಿಹಿ ಮಿಶ್ರಿತವಾಗಿರದೇ, ಸಮಗ್ರ ಶಿಕ್ಷಣದ ಹಿನ್ನೆಲೆಯೂ ಕಾರಣವಾಗಿದೆ ಎಂದರು.

ಶಿಕ್ಷಣದಲ್ಲಿ ಪ್ರಸಿದ್ಧಿ ಮುಖ್ಯವಲ್ಲ. ಸಮಗ್ರತೆಯೇ ಮುಖ್ಯ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಮುಖ್ಯ. ಜನಸಾಮಾನ್ಯರು ಶಿಕ್ಷಣದ ಭಾಗವಾಗಿರಬೇಕು ಎಂದು ಎಂ.ಜೆ. ಅಕ್ಬರ್ ಅಭಿಪ್ರಾಯಪಟ್ಟರು.

ಅತಿಥಿಗಳನ್ನು ಸ್ವಾಗತಿಸಿದ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಉನ್ನಚ ಶಿಕ್ಷಣವನ್ನು ನೋಡುವಾಗ ಚೀನಾ ನಮ್ಮೆದುರು ಮಾದರಿಯಾಗಿರುತ್ತದೆ. ವಿಶ್ವದ ಭವಿಷ್ಯವೂ ಅದರಲ್ಲಿ ಕಾಣಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಚೀನಾ ವಿದೇಶಗಳಲ್ಲಿ ವಿವಿಗಳನ್ನು ತೆರೆದು ಹೊಸ ಸಾಹಸಕ್ಕೆ ಮುಂದಾಗಿದೆ. ಚೀನಾ ಇಂದು ಮಲೇಷ್ಯಾ, ಕೊಲ್ಲಿ, ಶ್ರೀಲಂಕಾ, ಮಯಾನ್ಮಾರ್ ಗಳಲ್ಲಿ ತನ್ನ ವಿವಿಗಳನ್ನು ತೆರೆದಿದೆ ಎಂದರು.

ಅದೇ ಮಾರ್ಗದಲ್ಲಿ ಸಾಗಿರುವ ಭಾರತ ಸಹ ಈಗ ವಿದೇಶಗಳಲ್ಲಿ 20 ವಿವಿಗಳನ್ನು ಪ್ರಾರಂಭಿಸಿದೆ. ಮಣಿಪಾಲದಲ್ಲಿ ಈಗ ಪ್ರಾರಂಭಿಸಿರುವ ಚೀನಾ ಅಧ್ಯಯನ ಕೇಂದ್ರದಲ್ಲಿ ಚೀನಾ ದೇಶದ ಕುರಿತು ವಿಶೇಷ ತಿಳುವಳಿಕೆಯುಳ್ಳ ಯುವ ವಿಷಯ ತಜ್ಞರನ್ನು ಸಜ್ಜುಗೊಳಿಸಲಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಹೆ ಜಿಯೋಪೋಲಿಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅರವಿಂದ ಕುಮಾರ್ ಕೇಂದ್ರದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಜಿಯೋಪೋಲಿಟಿಕ್ಸ್‌ನ ಕ್ರಿಯಾತ್ಮಕ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಈ ಕೇಂದ್ರದಲ್ಲಿ ಚೀನಾ ಕುರಿತು ಒಳ್ಳೆಯ ಸಂಶೋಧಕರು ಹಾಗೂ ವಿಶ್ಲೇಷಕರನ್ನು ಸಿದ್ಧಗೊಳಿಸುವ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಹೆ ಪ್ರೊ ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್, ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಪ್ರೊ ವೈಸ್‌ಚಾನ್ಸಲರ್ ಡಾ. ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು. ಶೇಷಾದ್ರಿ ಚಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News