ಮಣಿಪಾಲದಲ್ಲಿ ಅಂ.ರಾ. ಆಂಗ್ಲ ಭಾಷೆಯ ಪರೀಕ್ಷಾ ವ್ಯವಸ್ಥೆ

Update: 2018-08-27 16:00 GMT

ಮಣಿಪಾಲ, ಆ.27: ಮಣಿಪಾಲ ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷಾ ವ್ಯವಸ್ಥೆ (ಐಇಎಲ್‌ಟಿಎಸ್) ಲಭ್ಯವಿರುವ ಒಪ್ಪಂದವೊಂದಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಬ್ರಿಟಿಷ್ ಕೌನ್ಸಿಲ್ ನಡುವೆ ಇಂದು ಸಹಿ ಹಾಕಲಾಯಿತು.

ಸೋಮವಾರ ಈ ಕುರಿತಂತೆ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಹಾಗೂ ಬ್ರಿಟಿಷ್ ಕೌನ್ಸಿಲ್ ಎಕ್ಸಾಮಿನೇಷನ್ ಎಂಡ್ ಇಂಗ್ಲೀಷ್ ಸರ್ವಿಸಸ್ ಇಂಡಿಯಾ ಲಿ.ನ ಆಡಳಿತ ನಿರ್ದೇಶಕ ಮೈಕೆಲ್ ಕಿಂಗ್ ಅವರು ಮಣಿಪಾಲ ವಿವಿ ಬಿಲ್ಡಿಂಗ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಮಾಹೆಯ ಪ್ರೊ. ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಗುಣಮಟ್ಟ ಅಧಿಕಾರಿ ಡಾ.ಪಿಎಲ್‌ಎನ್‌ಜಿ ರಾವ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಅಂತಾರಾಷ್ಟ್ರೀಯ ರಿಲೇಷನ್ಸ್ ನಿರ್ದೇಶಕ ಡಾ.ರಘು ರಾಧಾಕೃಷ್ಣನ್, ಕೆಎಂಸಿಯ ಡೀನ್ ಡಾ.ಪ್ರಗ್ನಾ ರಾವ್ ಹಾಗೂ ಡಾ.ಅಪರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮೈಕೆಲ್ ಕಿಂಗ್ ಅವರು, ಮಾಹೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಐಇಎಲ್‌ಟಿಎಸ್‌ನ ಕುರಿತಂತೆ ಮಾಹಿತಿಗಳನ್ನು ನೀಡಿದರು. ಇದು ವಿದೇಶಗಳಿಗೆ ವಲಸೆ ಬರುವವರಿಗೆ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಆಂಗ್ಲ ಭಾಷಾ ಕುಶಲತೆ ಪರೀಕ್ಷೆಯಾಗಿದ್ದು, ಕಳೆದ ವರ್ಷ ವಿಶ್ವದ ಮೂರು ಮಿಲಿಯ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು ಎಂದರು.

ವಿಶ್ವದಾದ್ಯಂತದ ಸುಮಾರು 10,000ಕ್ಕೂ ಅಧಿಕ ಶಾಲೆ, ವಿವಿಗಳು, ಉದ್ಯೋಗದಾತ ಸಂಸ್ಥೆಗಳು, ವಲಸೆ ಅಧಿಕಾರಿಗಳು ಹಾಗೂ ವೃತ್ತಿಪರ ಮಂಡಳಿಗಳು ಇದನ್ನು ಒಪ್ಪಿಕೊಂಡಿವೆ ಎಂದರು. ವಲಸೆ ಪ್ರಕ್ರಿಯೆ ಹಾಗೂ ವೀಸಾ ಅರ್ಜಿಗಳಿಗೆ ಆಸ್ಟ್ರೇಲಿಯ, ಕೆನಡಾ, ನ್ಯೂಜಿಲಂಡ್ ಹಾಗೂ ಬ್ರಿಟನ್‌ಗಳ ವಲಸೆ ಅಧಿಕಾರಿಗಳು ಐಇಎಲ್‌ಟಿಎಸ್‌ನ ಇಂಗ್ಲೀಷ್ ಭಾಷಾ ಪರೀಕ್ಷೆಗೆ ಮಾತ್ರ ಮಾನ್ಯತೆ ನೀಡುತ್ತಿದ್ದಾರೆ ಎಂದು ಕಿಂಗ್ ವಿವರಿಸಿದರು.

ಕರ್ನಾಟಕದಲ್ಲಿ ಕೇವಲ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಮಾತ್ರ ಐಇಎಲ್‌ಟಿಎಸ್ ಪರೀಕ್ಷೆ ಲಭ್ಯವಿದೆ. ಇದೀಗ ಮಣಿಪಾಲದಲ್ಲೂ ಮಾಹೆಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ಬರೆಯಲು ಅವಕಾಶ ಸಿಗಲಿದೆ ಎಂದರು. ಇದರೊಂದಿಗೆ ಬ್ರಿಟಿಷ್ ಕೌನ್ಸಿಲ್ ಮೂರು ದಿನಗಳ ತರಬೇತಿದಾರರಿಗೆ ತರಬೇತಿ (ಟಿಟಿಟಿ) ಕಾರ್ಯಕ್ರಮವನ್ನು ಕಾಲೇಜುಗಳ ತರಬೇತುದಾರರಿಗೆ ಆಯೋಜಿಸಲಿದೆ ಎಂದು ಕಿಂಗ್ ನುಡಿದರು.

ಇಂದಿನ ಒಪ್ಪಂದದಿಂದ ಮಣಿಪಾಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶಗಳನ್ನು ನಾವು ಕಲ್ಪಿಸಲಿದ್ದೇವೆ. ಆಸಕ್ತರು ಸುಲಭವಾಗಿ ಐಇಎಲ್‌ಟಿಎಸ್ ಪರೀಕ್ಷೆಯನ್ನು ಬರೆದು ವಿದೇಶಗಳಲ್ಲಿ ಉದ್ಯೋಗ ಮಾಡುವ ಅಥವಾ ಹೆಚ್ಚಿನ ಶಿಕ್ಷಣವನ್ನು ಪಡೆಯುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಅವಕಾಶಕ್ಕಾಗಿ ವಿದೇಶಗಳಿಗೆ ವಲಸೆ ಹೋಗುವ ಆಕಾಂಕ್ಷಿಗಳಿಗೂ ಇದೊಂದು ಸುವರ್ಣ ಅವಕಾಶ ಎಂದೂ ಕಿಂಗ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News