ಕೊಂಕಣಿ ಅಕಾಡಮಿಯಿಂದ ಅರಿವು ಮೂಡಿಸುವ ಕೆಲಸವಾಗಲಿ: ಐವನ್

Update: 2018-08-27 16:05 GMT

ಮಂಗಳೂರು, ಆ.27: ಕೊಂಕಣಿ ಅಕಾಡಮಿಯಿಂದ ನಿರಂತರ ಕಾರ್ಯಕ್ರಮ ಆಯೋಜಿಸಿ, ಭಾಷೆ, ಸಂಸ್ಕೃತಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಸೋಮವಾರ ಆಯೋಜಿಸಲಾದ್ದ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಭವ್ಯವಾದ ಕೊಂಕಣಿ ಭವನ, ಕೊಂಕಣಿ ಅಕಾಡೆಮಿ ಶಾಶ್ವತ ರಿಜಿಸ್ಟ್ರಾರ್, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕೊಂಕಣಿ ಶಿಕ್ಷಣ, ಅಕಾಡೆಮಿ ಸದಸ್ಯರಿಗೆ ಭತ್ತೆ ಮೊದಲಾದ ಹಲವು ಬೇಡಿಕೆಗಳಿದ್ದು, ಇವನ್ನು ಜಾರಿಗೆ ತರುವ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

ಸುಮಾರು 1,800 ಭಾಷೆಗಳು ಸಂವಿಧಾನ 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆಯಲು ಕಾಯುತ್ತಿರುವಾಗ ಕೊಂಕಣಿ ಅದರಲ್ಲಿ ಸ್ಥಾನ ಪಡೆದು, ಒಂದು ಶಕ್ತಿಶಾಲಿ ಭಾಷೆಯಾಗಿ ಹೊರಹೊಮ್ಮಿದೆ. ಭಾಷೆಗಿರುವ ಸಾವಿವಾರು ವರ್ಷಗಳ ಇತಿಹಾಸವೇ ಇದಕ್ಕೆ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕಾಡಮಿ ಅಧ್ಯಕ್ಷ ಆರ್.ಪಿ.ನಾಯಕ್, ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅಕಾಡಮಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸರಕಾರದಿಂದ ಬರುವ ಸಣ್ಣ ಮೊತ್ತದಿಂದ ಇವುಗಳನ್ನು ಮಾಡಬೇಕು ಎಂದರು.

ಕೊಂಕಣಿ ಜಾಗೃತಿ ಅಭಿಯಾನ, ದೂರದರ್ಶನದಲ್ಲಿ ಖಾಣ್ ಜಾವಣ್, 6-8ನೇ ತರಗತಿ ಮಕ್ಕಳಿಗೆ ಕಾರ್ಯಾಗಾರ ಸರ್ಟಿಫಿಕೇಟ್ ಕೋರ್ಸ್, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರಂಗ ತರಬೇತಿ, ಗಾಯನ ತರಬೇತಿ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಕಿಶೋರ್‌ಕುಮಾರ್ ಸಿ.ಕೆ. ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಅಕಾಡಮಿ ರಿಜಿಸ್ಟ್ರಾರ್ (ಪ್ರಭಾರ)ಚಂದ್ರಹಾಸ ರೈ ಉಪಸ್ಥಿತರಿದ್ದರು.

ಅಕಾಡಮಿ ಸದಸ್ಯ ಅಶೋಕ್‌ಕುಮಾರ್ ಸ್ವಾಗತಿಸಿ, ಸ್ಟೀಫನ್ ರಾಡ್ರಿಗಸ್ ಪ್ರಸ್ತಾವಿಸಿದರು. ಸ್ಮಿತಾ ಪ್ರಭು ಕಾರ್ಯಕ್ರಮ ನಿರೂಪಿಸಿ, ಸಂಶೋಷ್ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News