ವಾಜಪೇಯಿಯನ್ನು ಬಿಜೆಪಿ ಕುಬ್ಜರನ್ನಾಗಿಸಿದೆ: ಚಿತಾಭಸ್ಮ ವಿಸರ್ಜನೆಯ ಕುರಿತು ಶಿವಸೇನೆ ಟೀಕೆ

Update: 2018-08-27 16:32 GMT

ಮುಂಬೈ,ಆ.27: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ ವಿಸರ್ಜನೆ ಕಾರ್ಯಕ್ಕೆ ಬಿಜೆಪಿ ರಾಜಕೀಯ ಬಣ್ಣ ಬಳಿದಿದೆ ಎಂದು ಆರೋಪಿಸಿರುವ ಶಿವಸೇನೆ, ಬಿಜೆಪಿಯ ಈ ನಕಲಿ ಪ್ರೀತಿಯು ದೇಶದ ಧೀಮಂತ ನಾಯಕ ತನ್ನ ಮರಣದ ನಂತರ ಸಣ್ಣವರಾಗಿ ಕಾಣುವಂತೆ ಮಾಡಿದೆ ಎಂದು ಕುಟುಕಿದೆ.

93ರ ಹರೆಯದ ವಾಜಪೇಯಿ ಆಗಸ್ಟ್ 16ರಂದು ನಿಧನ ಹೊಂದಿದ್ದರು. ಅವರ ಚಿತಾಭಸ್ಮವನ್ನು ದೇಶಾದ್ಯಂತದ ವಿವಿಧ ನದಿಗಳಲ್ಲಿ ವಿಸರ್ಜಿಸಲು ಬಿಜೆಪಿ ನಿರ್ಧರಿಸಿದೆ. ಶಿವಸೇನೆಯು ಟೀಕೆ ಮತ್ತು ವಿಡಂಬನೆಯಿಂದ ಕೂಡಿದ ಹೇಳಿಕೆಯಲ್ಲಿ, ಬಿಜೆಪಿಯು ತನ್ನ ಹಿರಿಯ ನಾಯಕರಿಗೆ ಪಾಮುಖ್ಯತೆ ನೀಡುವುದಿಲ್ಲ. ಆದರೆ ಅವರ ಚಿತಾಭಸ್ಮಕ್ಕೆ ಪಾಮುಖ್ಯತೆಯನ್ನು ನೀಡಲಾಗುತ್ತದೆ. ಓರ್ವ ನಾಯಕನಿಗೆ ನಾವು ಸೂಚಿಸುವ ನಿಜವಾದ ಗೌರವವೆಂದರೆ ಅವರ ಯೋಚನೆಗಳನ್ನು ಮುಂದೆ ಕೊಂಡೊಯ್ಯುವುದು. ಅವರ ಬಗ್ಗೆ ನಕಲಿ ಪ್ರೀತಿ ತೋರಿಸುವುದಲ್ಲ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿಯನ್ನು ಕುಟುಕಿದೆ.

ಅಟಲ್ ಅವರ ಚಿತಾಭಸ್ಮವನ್ನು ಒಂದು ಪಕ್ಷ ವಿಸರ್ಜಿಸುವ ಬದಲು ಅದನ್ನು ಎಲ್ಲ ಪಕ್ಷಗಳು ಭಾಗಿಯಾಗಿರುವ ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿ ನಡೆಸಬಹುದಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದಲ್ಲಿ ಶಿವಸೇನೆ, ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮತ್ತು ಪಂಜಾಬ್‌ನಲ್ಲಿ ಅಕಾಲಿ ದಳ ಅಟಲ್ ಅವರ ಚಿತಾಭಸ್ಮವನ್ನು ಪಡೆದು ವಿಸರ್ಜನಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಿತ್ತು. ಕಾಂಗ್ರೆಸ್‌ನ ರಾಹುಲ್ ಗಾಂಧಿ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲುಪಡೆದು ಅಟಲ್ ಅವರ ದೊಡ್ಡತನ ಮತ್ತು ಜನಪ್ರಿಯತೆಯನ್ನು ಇಡೀ ಜಗತ್ತೇ ವೀಕ್ಷಿಸುವಂತೆ ಮಾಡುವ ಅವಕಾಶವಿತ್ತು ಎಂದು ಸೇನೆ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News