×
Ad

ಅಪಘಾತ: ಸ್ಕೂಟರ್ ಸವಾರನ ಮೇಲೆ ಹರಿದ ಬಸ್ !

Update: 2018-08-27 23:44 IST

ಮಂಗಳೂರು, ಆ.27: ಖಾಸಗಿ ಬಸ್‌ವೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸವಾರನ ಕಾಲಿನ ಮೇಲೆ ಬಸ್ ಹರಿದ ಘಟನೆ ನಗರದ ಎ.ಬಿ.ಶೆಟ್ಟಿ ವೃತ್ತದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಕುದ್ರೋಳಿ ಕಾರ್‌ಸ್ಟ್ರೀಟ್ ನಿವಾಸಿ ಸರ್ವಿನ್ ಪ್ರಶಾಂತ್ ಮೊಬೆನ್ (35) ಗಂಭೀರವಾಗಿ ಗಾಯಗೊಂಡವರು. ಗಾಯಾಳು ನಗರದ ಅತ್ತಾವರ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೊಬೆನ್ ತಾನು ಹೊಸದಾಗಿ ಖರೀದಿಸಿದ್ದ ಸ್ಕೂಟರ್‌ಗೆ ರಿಜಿಸ್ಟ್ರೇಶನ್‌ಗಾಗಿ ದಾಖಲೆ ಪತ್ರಗಳನ್ನು ತರಲು ಅತ್ತಾವರ  ಆಸ್ಪತ್ರೆಯಿಂದ ಕ್ಲಾಕ್ ಟವರ್ ಮಾರ್ಗವಾಗಿ ಸೇಟ್‌ಬ್ಯಾಂಕ್ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು.

ಇವರು ನಗರದ ಎ.ಬಿ. ಶೆಟ್ಟಿ ವೃತ್ತ ತಲುಪುತ್ತಿದ್ದಂತೆ, ಅದೇ ಮಾರ್ಗದಲ್ಲಿ ‘ವಿಶಾಲ್ ಟ್ರಾವೆಲ್ಸ್’ ಹೆಸರಿನ ಎಕ್ಸ್‌ಪ್ರೆಸ್ ಬಸ್‌ವೊಂದನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಸದಾಶಿವ ಸ್ಕೂಟರ್‌ನ್ನು ಎಡಬದಿಯಿಂದ ಓವರ್‌ಟೇಕ್ ಮಾಡುವ ಭರದಲ್ಲಿ ಬಸ್‌ನ ಬಲಬದಿಯ ಬಾಡಿಯಿಂದ ಸ್ಕೂಟರ್ ಢಿಕ್ಕಿ ಹೊಡೆಯಿತು.

ಪರಿಣಾಮ ಸವಾರ ಸ್ಕೂಟರ್‌ನೊಂದಿಗೆ ಕಾಂಕ್ರಿಟ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಸವಾರನ ಎಡಕಾಲಿನ ಪಾದದ ಮೇಲೆ ಬಸ್‌ನ ಟೈರ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News