ಹೆಜಮಾಡಿ ಒಳರಸ್ತೆಗೆ ಟೋಲ್: ಗ್ರಾಮಸಭೆಯಲ್ಲಿ ವಿರೋಧ

Update: 2018-08-28 17:38 GMT

ಪಡುಬಿದ್ರೆ, ಆ. 28: ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ನವಯುಗ ಕಂಪೆನಿ ಟೋಲ್ ನಿರ್ಮಾಣ ಮಾಡಿರುವುದನ್ನು ಗ್ರಾಮಸ್ಥರು ವಿರೋಧಿಸಿದರು.

ಹೆಜಮಾಡಿ ಬಿಲ್ಲವ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಹೆಜಮಾಡಿ ಗ್ರಾಮ ಪಂಚಾಯ್ತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥರು, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದ ಹೆಜಮಾಡಿ ಒಳರಸ್ತೆಯಲ್ಲಿ ಟೋಲ್ ನಿರ್ಮಿಸುವಂತಾಗಿದೆ. ಟೋಲ್ ನಿರ್ಮಾಣದಿಂದ ಹೆಜಮಾಡಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಜಗದೀಶ್ ಭಟ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಟೋಲ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುವುದಾಗಿ ಜಗದೀಶ್ ಭರವಸೆ ನೀಡಿದರು. ಸಿಆರ್‍ಝಡ್ ಕಾಯ್ದೆ ಉಲ್ಲಂಘಿಸಿ ಹೆಜಮಾಡಿ ಮುಟ್ಟಳಿವೆಯಲ್ಲಿ ಬಂದರು ಇಲಾಖೆಯಿಂದ ಸೇತುವೆ ನಿರ್ಮಾಣ ಮಾಡಿರುವ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಆರ್‍ಝಡ್ ಇಲಾಖೆಯ ಅಧಿಕಾರಿ ಧೀರಜ್ ತಿಳಿಸಿದರು.

ಹೆಜಮಾಡಿ ಗ್ರಾಮವು ಸಿಆರ್‍ಝಡ್ 3ರಲ್ಲಿ ಬರುತ್ತಿದೆ. ಸೇತುವೆ ಪ್ರದೇಶವು ಸಿಆರ್‍ಝಡ್ ವ್ಯಾಪ್ತಿಯಲ್ಲಿದೆ. ಕಾಮಿನಿ ನದಿ ಮುಖಜ ಭೂಮಿಯಾಗಿರುವ ಮುಟ್ಟಳಿವೆ  ಸೂಕ್ಷ್ಮ ಪ್ರದೇಶವೂ ಆಗಿದೆ ಎಂದು ವಿವರಿಸಿದರು. ಮತ್ಸ್ಯಾಶ್ರಯ ಯೋಜನೆಯನ್ನು ರಾಜೀವಗಾಂಧಿ ವಸತಿ ನಿಗಮದಲ್ಲಿ ವಿಲೀನ ಮಾಡಿರುವುದರಿಂದ ಮೀನುಗಾರರಿಗೆ ತೊಂದರೆಯಾಗಿದೆ. ಮತ್ಸ್ಯಾಶ್ರಯ ಯೋಜನೆ ಈ ಹಿಂದಿನಂತೆ ಪ್ರತ್ಯೇಕವಾಗಿಯೇ ಕಾರ್ಯಗತವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರ ಒತ್ತಾಯದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು. 

ಹೆಜಮಾಡಿ ಯಾರ್ಡ್‍ನಿಂದ ಬಂದರು ವರೆಗಿನ ಸುಮಾರು 1.12 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 1.71 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕೃತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ತೆಂಗಿನ ಮರದಿಂದ ಬಿದ್ದರೆ ಸರ್ಕಾರದಿಂದ ಯಾವುದೇ ಪರಿಹಾರ ಲಭ್ಯವಿಲ್ಲ. ತೆಂಗಿಗೆ ಬರುವ ರೋಗಗಳ ಬಗ್ಗೆ ಹಾಗೂ ಬೆಳೆಗಾರರ ಬಗ್ಗೆ ವಿಶೇಷ ಗಮನಹರಿಸಲು ತೋಟಗಾರಿಕಾ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಪಂಚಾಯ್ತಿ ಸದಸ್ಯ ಪ್ರ್ರಾಣೇಶ್  ತೋಟಗಾರಿಕಾ ಇಲಾಖೆ ಅಧಿಕಾರಿ ಶ್ವೇತಾ ಅವರನ್ನು ಆಗ್ರಹಿಸಿದರು.

ಹೆಜಮಾಡಿಯಲ್ಲಿ ರಾತ್ರಿ ಪಾಳಿಯಲ್ಲಿ ಮೆಸ್ಕಾಂನಿಂದ ಸಿಬ್ಬಂದಿ ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಮೆಸ್ಕಾಂ ಪಡುಬಿದ್ರಿ ಶಾಖಾಧಿಕಾರಿ ಸುಧೀರ್ ಪಟೇಲ್ ಅವರನ್ನು ಒತ್ತಾಯಿಸಿದರು. 

ಪಡುಬಿದ್ರಿಯಲ್ಲಿ ಮೆಸ್ಕಾಂ ನಿರ್ವಹಣ ಕೇಂದ್ರ ಸ್ಥಾಪನೆ ಹಾಗೂ ಪಡುಬಿದ್ರಿ ವ್ಯಾಪ್ತಿಗೆ 108 ಅಂಬುಲೆನ್ಸ್‍ಗಾಗಿ ನಿರ್ಣಯ ಕೈಗೊಳ್ಳಲಾಯಿತು.  
ಪಡುಬಿದ್ರಿ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಬಿ. ರಾವ್, ಉಪವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್‍ಐ ದಿವಾಕರ ಸುವರ್ಣ ಮಾಹಿತಿ ನೀಡಿದರು. 

ಹೆಜಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ  ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯ್ತಿ  ಸದಸ್ಯೆ ರೇಣುಕಾ ಪುತ್ರನ್, ನೋಡೆಲ್ ಅಧಿüಕಾರಿ ಶಂಕರ್ ಸುವರ್ಣ, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News