ಮಾನವ ಹಕ್ಕುಗಳ ಉಲ್ಲಂಘನೆಯ ವಿರೋಧಿಗಳನ್ನು ಸರಕಾರ ಗುರಿಯಾಗಿಸಿಕೊಳ್ಳುತ್ತಿದೆ: ಸುಧಾ ಭಾರದ್ವಾಜ್

Update: 2018-08-29 14:23 GMT

ಹೊಸದಿಲ್ಲಿ, ಆ.29: ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಮಾತನಾಡುತ್ತಿರುವವರು ಮತ್ತು ದಲಿತರು ಹಾಗೂ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವವರನ್ನು ಈಗಿನ ಆಡಳಿತವು ಗುರಿಯಾಗಿಸಿಕೊಳ್ಳುತ್ತಿದೆ ಎಂದು ಕಾರ್ಮಿಕ ಒಕ್ಕೂಟ ನಾಯಕಿ ಹಾಗೂ ನ್ಯಾಯವಾದಿ ಸುಧಾ ಭಾರದ್ವಾಜ್ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆಯ ಭಾಗವಾಗಿ ಮಂಗಳವಾರ ದೇಶಾದ್ಯಂತ ಹಲವಾರು ನಗರಗಳಲ್ಲಿ ಪೊಲೀಸರು ನಡೆಸಿದ ದಾಳಿಗಳಲ್ಲಿ ನಕ್ಸಲ್ ನಂಟು ಹೊಂದಿರುವ ಶಂಕೆಯಲ್ಲಿ ಬಂಧಿಸಲ್ಪಟ್ಟಿರುವ ಎಡಪಂಥೀಯ ಚಿಂತಕರಲ್ಲಿ ಭಾರದ್ವಾಜ್ ಕೂಡ ಒಬ್ಬರಾಗಿದ್ದಾರೆ. ಅವರನ್ನು ಫರೀದಾಬಾದ್‌ನ ಅವರ ನಿವಾಸದಲ್ಲಿ ಸ್ಥಾನಬದ್ಧತೆಗೊಳಪಡಿಸಲಾಗಿದ್ದು,ತನ್ನ ವಕೀಲರನ್ನು ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ನಿವಾಸವನ್ನು ಕಾಯುತ್ತಿದ್ದಾರೆ.

 ‘‘ನನ್ನ ಮೊಬೈಲ್,ಲ್ಯಾಪ್‌ಟಾಪ್ ಮತ್ತು ಪೆನ್ ಡ್ರೈವ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿರುವ ಮಾಹಿತಿಗಳನ್ನು ಅವರು ಬಟಾಬಯಲು ಮಾಡುತ್ತಾರೆ ಎಂದು ಆತಂಕಗೊಂಡಿದ್ದೇನೆ. ನನ್ನ ಜಿ-ಮೇಲ್ ಮತ್ತು ಟ್ವಿಟರ್ ಪಾಸ್‌ವರ್ಡ್‌ಗಳನ್ನೂ ಅವರು ಪಡೆದುಕೊಂಡಿದ್ದಾರೆ ’’ ಎಂದು ಭಾರದ್ವಾಜ್ ತಿಳಿಸಿದರು.

10 ಜನರ ತಂಡ ಮನೆಗೆ ಆಗಮಿಸಿದ್ದು,ಅವರಲ್ಲಿ ಹರ್ಯಾಣದ ಓರ್ವ ಮಹಿಳಾ ಕಾನ್‌ಸ್ಟೇಬಲ್ ಮಾತ್ರ ಇದ್ದು,ಉಳಿದವರೆಲ್ಲ ಮಹಾರಾಷ್ಟ್ರ ಪೊಲೀಸರಾಗಿದ್ದರು. ಅವರ ಬಳಿ ಸರ್ಚ್‌ವಾರಂಟ್ ಇರಲಿಲ್ಲ ಎಂದು ಭಾರದ್ವಾಜ್‌ರ ಪುತ್ರಿ ಅನು ಭಾರದ್ವಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News