ಸುದರ್ಶನ್ ಜೈನ್ ಕೊಲೆ ಪ್ರಕರಣ: ಇನ್ನೋರ್ವ ಆರೋಪಿ ಸೆರೆ

Update: 2018-08-29 14:47 GMT

ಮೂಡುಬಿದಿರೆ, ಆ. 29: ಎರಡು ವಾರದ ಹಿಂದೆ ಆಸ್ತಿಗೆ ಸಂಬಂಧಿಸಿದ ಹಣದಾಸೆಗಾಗಿ ತಮ್ಮನೋರ್ವ ತನ್ನ ಸ್ಮೇಹಿತರೊಂದಿಗೆ ಸೇರಿ ಒಡಹುಟ್ಟಿದ ಸಹೋದರನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ, ವಾಹನ ಚಾಲಕ ಬೆಳ್ತಂಗಡಿ ಆರಂಬೋಡಿಯ ಪ್ರಭಾ ಯಾನೆ ಪ್ರಭಾಕರ ಶೆಟ್ಟಿ (32) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಬಟ್ಟೆ ಅಂಗಡಿಯ ಉದ್ಯೋಗಿಯಾಗಿದ್ದ ಹೊಸಬೆಟ್ಟು ಕಡಂಬರಗುತ್ತು ಸುದರ್ಶನ್ ಜೈನ್ (28) ಆ. 11ರಂದು ರಾತ್ರಿ ಕೆಲಸ ಮುಗಿಸಿ ತನ್ನ ತಮ್ಮ ಸುಧೀರ್ ಜೈನ್ ಜತೆ ಬೈಕ್ ನಲ್ಲಿ ಮನೆಗೆ ಹೊರಟಿದ್ದ. ಮನೆ ಹತ್ತಿರ ತಲುಪುವಾಗ ಬೈಕ್ ಕೆಟ್ಟು ಹೋಗಿದೆ ಎಂದು ತಮ್ಮ ಸುಳ್ಳು ಹೇಳಿ ಅಣ್ಣನನ್ನು ಬೈಕ್‍ನಿಂದ ಇಳಿಸಿ ಹತ್ತಿರದಲ್ಲಿ ನಿಂತಿದ್ದ ಕಾರಿನೊಳಗೆ ಕರೆದುಕೊಂಡು ಹೋಗಿದ್ದ. ಅದರಲ್ಲಿದ್ದ ಸುಧೀರ್ ಸ್ನೇಹಿತರು ಕಾರನ್ನು ಬೇರೆಡೆಗೆ ಕೊಂಡೊಯ್ದು ಸುದರ್ಶನ್ ರಿಗೆ ಮಾರಕಾಯುಧದಿಂದ ಇರಿದು ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಳಿಕ ಮೃತದೇಹವನ್ನು ಪುಚ್ಚೆಮೊಗರಿನ ಪಲ್ಗುಣಿ ನದಿಗೆ ಎಸೆದಿದ್ದರು. ಆ.17ರಂದು ಸುದರ್ಶನ್‍ನ  ಮೃತದೇಹ ಮರವೂರು ಡ್ಯಾಂನಲ್ಲಿ ಪತ್ತೆಯಾಗಿತ್ತು. ಆರೋಪಿ ಪ್ರಭಾಕರ ಪ್ರಕರಣದಲ್ಲಿ ಬಳಕೆಯಾಗಿದ್ದ ಬೊಲೆರೊ ಕಾರಿನ ಚಾಲಕನಾಗಿದ್ದ. ಈ ಕಾರನ್ನು ಆರಂಬೋಡಿ ವ್ಯಕ್ತಿಯಿಂದ ಬಾಡಿಗೆಗೆಂದು ಪಡೆದುಕೊಂಡಿದ್ದು, ಆತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ, ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ. ಈತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಯಿತು.

ಮೃತನ ತಮ್ಮ ಸುಧೀರ್ ಜೈನ್ (24) ಆತನ ಸ್ನೇಹಿತರಾದ ಹೊಕ್ಕಾಡಿಗೋಳಿಯ ಸಂದೀಪ್ ಶೆಟ್ಟಿ (29) ಹಾಗೂ ವೇಣೂರು ಆರಂಬೋಡಿಯ ಬಾಲರಾಜ್ (23)ನನ್ನು ಈ ಹಿಂದೆಯೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News