ಕೇರಳ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಕ್ಕೆ ತ್ರಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ತಡೆ: ಸಿಪಿಎಂ ಆರೋಪ

Update: 2018-08-29 15:06 GMT

ಅಗರ್ತಲ, ಆ.29: ತ್ರಿಪುರದಲ್ಲಿ ಕೇರಳ ನೆರೆ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುತ್ತಿದ್ದ ಸಿಪಿಐ(ಎಂ) ನಾಯಕರು ಹಾಗೂ ಬೆಂಬಲಿಗರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಕೇರಳ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲು ಸಿಪಿಐ(ಎಂ) ಆಯೋಜಿಸಿದ್ದ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಗೋಮತಿ ಜಿಲ್ಲೆಯ ಉದಯ್‌ಪುರದಲ್ಲಿ ಸಂಸದ ಶಂಕರ್‌ಪ್ರಸಾದ್ ದತ್ತಾ ಹಾಗೂ ಮಾಜಿ ಸಚಿವ ಕೇಶಬ್ ಮಜೂಮ್ದಾರ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸುತ್ತಿದ್ದಾಗ ಕೆಲವು ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿ ದೇಣಿಗೆಯ ಪೆಟ್ಟಿಗೆಯನ್ನು ಎಳೆದೊಯ್ಯಲು ಪ್ರಯತ್ನಿಸಿದರು. ಸಿಪಿಐ(ಎಂ) ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಬಿಜನ್ ಧಾರ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿಪಾಹಿಜಲ ಜಿಲ್ಲೆಯ ಸೋನಾಮುರ, ದಕ್ಷಿಣ ತ್ರಿಪುರಾದ ಬೆಲೋನಿಯ, ಪಶ್ಚಿಮ ತ್ರಿಪುರಾದ ಜಿಲ್ಲೆಯ ಕೆಲವೆಡೆಯೂ ಬಿಜೆಪಿ ಕಾರ್ಯಕರ್ತರು ದೇಣಿಗೆ ಸಂಗ್ರಹಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ರಾಜಕೀಯ ಪಕ್ಷದ ಕೆಲವು ಕಾರ್ಯಕರ್ತರು ನೆರೆಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುತ್ತಿದ್ದಾಗ ಉದಯ್‌ಪುರದಲ್ಲಿ ಕೆಲವು ಹುಡುಗರು ತಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಆ ವೇಳೆಗಾಗಲೇ ದೇಣಿಗೆ ಸಂಗ್ರಹ ನಿಲ್ಲಿಸಿ ಕಾರ್ಯಕರ್ತರು ಅಲ್ಲಿಂದ ತೆರಳಿದ್ದರು. ಘಟನೆಯಲ್ಲಿ ಯಾರಿಗೂ ಗಾಯವಾದ ಬಗ್ಗೆ ವರದಿಯಾಗಿಲ್ಲ ಎಂದು ಸಹಾಯಕ ಐಜಿಪಿ ಸ್ಮೃತಿ ರಂಜನ್‌ದಾಸ್ ತಿಳಿಸಿದ್ದಾರೆ. ಆರೋಪವನ್ನು ನಿರಾಕರಿಸಿರುವ ಬಿಜೆಪಿ ವಕ್ತಾರ ಡಾ ಅಶೋಕ್ ಸಿನ್ಹ, ಯಾವುದೇ ರೀತಿಯ ಹಿಂಸೆಗೆ ಆಸ್ಪದ ನೀಡಬಾರದೆಂದು ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದಿದ್ದಾರೆ. ಇಲ್ಲಿ ಸಂಗ್ರಹಿಸಿದ ನಿಧಿ ಕೇರಳಕ್ಕೆ ತಲುಪುತ್ತದೆ ಎಂಬುದಕ್ಕೆ ಏನು ಗ್ಯಾರಂಟಿಯಿದೆ. ಸಿಪಿಐ(ಎಂ) ಈ ಹಣವನ್ನು ಜೇಬಿಗಿಳಿಸಬಹುದು. ನಿಧಿ ಸಂಗ್ರಹದ ವಿಷಯದಲ್ಲಿ ಸ್ಥಳೀಯರೊಂದಿಗಿನ ಭಿನ್ನಾಭಿಪ್ರಾಯದಿಂದ ಘರ್ಷಣೆ ಸಂಭವಿಸಿರಬಹುದು ಎಂದು ಸಿನ್ಹ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News