ಸರ್ವಾಧಿಕಾರ ವಿರುದ್ದದ ಹೋರಾಟಗಾರರ ಬಂಧನ: ಉಡುಪಿ ಸಿಪಿಐ(ಎಂ) ಖಂಡನೆ

Update: 2018-08-29 15:52 GMT

ಉಡುಪಿ, ಆ.29: ಮಾನವ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರನ್ನು ಹಾಗೂ ಎಡ ಚಿಂತನೆಯ ಬುದ್ದಿಜೀವಿಗಳ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಿದ ಸರ್ವಾಧಿಕಾರಿ ಕ್ರಮವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಮಹಾರಾಷ್ಟ್ರದ ಭೀಮಾ ಕೊರೆಗಾಂವ ಘಟನೆಯಲ್ಲಿ ದಲಿತರ ಮೇಲೆ ನಡೆದ ದಾಳಿಯ ನಂತರ ದಲಿತ ಹಕ್ಕುಗಳ ಕಾರ್ಯಕರ್ತರು ಹಾಗೂ ಅವರಿಗೆ ಸಹಕರಿಸಿದ ವಕೀಲರನ್ನು ಬಂಧಿಸುವ ಕೆಲಸವನ್ನು ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದೆ. ಇಂದು ದೇಶದಾದ್ಯಂತ ರೈತ, ಕಾರ್ಮಿಕ ಹಾಗೂ ದಲಿತ ಚಳುವಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ದಮನಕಾರಿ ಬಂಧನಗಳು ನಡೆಯುತ್ತಿವೆ. ಕೋಮುವಾದದ ವಿರುದ್ಧ ಎಚ್ಚರ ಮೂಡಿಸುವ, ಸೌಹಾರ್ದ ವಿಚಾರವನ್ನು ಪಸರಿಸುವ ಕೆಲಸದಲ್ಲಿ ಎಡಪಂಥೀಯರು ತೊಡಗಿದ್ದಾರೆ. ಇದರಿಂದ ಅಸಮಧಾನಗೊಂಡಿರುವ ಬಿಜೆಪಿ ಸರಕಾರಗಳು ಇವುಗಳನ್ನು ಹತ್ತಿಕ್ಕುವ ಪ್ರಯತ್ನವಾಗಿ ಈ ದಾಳಿ ನಡೆಸುತ್ತಿವೆ. ಇದು 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ.

ಆದುದರಿಂದ ತಕ್ಷಣವೇ ಎಲ್ಲಾ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ಒತ್ತಾಯಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News