ಅಮೆರಿಕಕ್ಕೆ ಅಕ್ರಮ ಪ್ರವೇಶ: 19 ಮಂದಿ ಬಂಧನ; ಇಬ್ಬರು ಭಾರತೀಯರು

Update: 2018-08-29 16:38 GMT

ವಾಶಿಂಗ್ಟನ್, ಆ. 29: ಮೆಕ್ಸಿಕೊದಿಂದ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 19 ಮಂದಿಯನ್ನು ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಭಾರತೀಯರು.

19 ಅಕ್ರಮ ವಲಸಿಗರು ರವಿವಾರ ರಾತ್ರಿ ದೋಣಿಯೊಂದರಲ್ಲಿ ಮೆಕ್ಸಿಕೊದಿಂದ ಅಮೆರಿಕದ ಜಲಪ್ರದೇಶವನ್ನು ಪ್ರವೇಶಿಸುವುದನ್ನು ಅಮೆರಿಕ ಗಡಿ ಗಸ್ತು ಪಡೆಯ ವಾಯು ಸರ್ವೇಕ್ಷಣಾ ವಿಮಾನವೊಂದು ಪತ್ತೆಹಚ್ಚಿತು ಎಂದು ಸಿಬಿಪಿ ತಿಳಿಸಿದೆ. ಬಳಿಕ, ಅಮೆರಿಕ ತಟರಕ್ಷಣಾ ಪಡೆಯು ಆ ದೋಣಿಯನ್ನು ಕ್ಯಾಲಿಫೋರ್ನಿಯದ ಪಾಯಿಂಟ್ ಲೊಮ ಕರಾವಳಿಯಿಂದ 24 ಕಿ.ಮೀ. ದೂರದಲ್ಲಿ ತಡೆಯಿತು.

ಬಂಧಿತರಲ್ಲಿ ಇಬ್ಬರು ಕಳ್ಳಸಾಗಾಣಿಕೆದಾರರು ಮತ್ತು 15 ಮೆಕ್ಸಿಕೊ ರಾಷ್ಟ್ರೀಯರು ಇದ್ದಾರೆ. ಕಳ್ಳಸಾಗಾಣಿಕೆದಾರರ ವಿರುದ್ಧ ಮಾನವ ಸಾಗಾಣಿಕೆ ಮೊಕದ್ದಮೆಗಳನ್ನು ಹೂಡಬಹುದಾಗಿದೆ ಎಂದು ಸಿಬಿಪಿ ತಿಳಿಸಿದೆ.

ಅಕ್ರಮ ವಲಸಿಗರಲ್ಲಿ ಭಾರತೀಯರೇ ಅಧಿಕ

ಅಕ್ರಮವಾಗಿ ಗಡಿ ದಾಟಿ ಅಮೆರಿಕ ಪ್ರವೇಶಿಸುವವರ ಪೈಕಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 4,197 ಭಾರತೀಯರನ್ನು ಅಮೆರಿಕ ಗಡಿ ಗಸ್ತು ಪಡೆ ಬಂಧಿಸಿದೆ ಎಂದು ‘ಲಾಸ್ ಏಂಜಲಿಸ್ ಟೈಮ್ಸ್’ ವರದಿ ಮಾಡಿದೆ.

ಅವರ ಪೈಕಿ ಹೆಚ್ಚಿನವರು ಆಶ್ರಯ ಕೋರುತ್ತಾರೆ. ಅವರ ಪೈಕಿ ಕೆಲವರನ್ನು ಸ್ವೀಕರಿಸಲಾಗುತ್ತದೆ. 2014 ಮತ್ತು 2016ರಲ್ಲಿ 483 ಭಾರತೀಯರಿಗೆ ಆಶ್ರಯ ನೀಡಲಾಗಿದೆ. ಉಳಿದವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ.

25 ಲಕ್ಷ ರೂ. ಮೊತ್ತದ ಜೂಜು!

ಭಾರತದಿಂದ ಅಮೆರಿಕ ಯಾತ್ರೆಯು ಹಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಹಲವಾರು ದೇಶಗಳ ಮೂಲಕ ಹಾದು ಹೋಗಬೇಕಾಗುತ್ತದೆ.

ಮೆಕ್ಸಿಕೊದ ಗಡಿ ದಾಟಿ ಅಮೆರಿಕವನ್ನು ಪ್ರವೇಶಿಸುವ ಕೊನೆಯ ಕೆಲವು ಮೈಲಿಗಳನ್ನು ನಡೆದು ಅಥವಾ ವಾಹನಗಳ ಮೂಲಕ ಅಥವಾ ದೋಣಿ ಮೂಲಕ ಕ್ರಮಿಸಲಾಗುತ್ತದೆ. ಇದೊಂದು ಅತ್ಯಂತ ಸಂಘಟಿತ ಕಳ್ಳಸಾಗಣೆ ಜಾಲವಾಗಿದ್ದು, ಪ್ರತಿಯೊಬ್ಬ ಯಾನಿಯಿಂದ 25 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡಲಾಗುತ್ತದೆ. ಆದರೆ, ಯಾವುದೇ ಗ್ಯಾರಂಟಿ ಇರುವುದಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News