ಮೆಹುಲ್ ಚೋಕ್ಸಿ ಪಲಾಯನಕ್ಕೆ ಪ್ರಧಾನಿ ಕಚೇರಿಯ ನೆರವು: ಕಾಂಗ್ರೆಸ್ ಆರೋಪ

Update: 2018-08-29 16:51 GMT

ಹೊಸದಿಲ್ಲಿ, ಆ.29: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧದ ದೂರುಗಳ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿ ನಿರ್ಲಕ್ಷದ ಧೋರಣೆ ವಹಿಸಿದ ಕಾರಣ ಚೋಕ್ಸಿ ಭಾರತದಿಂದ ಪಲಾಯನ ಮಾಡಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೆಹುಲ್ ಚೋಕ್ಸಿ ವಿರುದ್ಧದ ಆರೋಪಗಳಿಗೆ ಬಲವಾದ ಪುರಾವೆಗಳಿದ್ದರೂ, ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಚೋಕ್ಸಿ ಎಸಗಿರುವ ಅಪರಾಧದ ಗಂಭೀರತೆಯ ಅರಿವು ಇದ್ದರೂ ಪ್ರಧಾನಮಂತ್ರಿಗಳ ಕಚೇರಿ ಇದನ್ನು ನಿರ್ಲಕ್ಷಿಸಿದ ಕಾರಣ ಆತ ದೇಶಬಿಟ್ಟು ಪಲಾಯನ ಮಾಡಲು ಅನುಕೂಲವಾಗಿದೆ. 23,484 ಕೋಟಿ ರೂ. ಮೊತ್ತದ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ವಿದೇಶಕ್ಕೆ ಪಲಾಯನ ಮಾಡಲು ನರೇಂದ್ರ ಮೋದಿಯವರ ನೇತೃತ್ವದ ಪ್ರಧಾನಮಂತ್ರಿ ಕಚೇರಿಯ ಮೌನಸಮ್ಮತಿಯಿತ್ತು ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 2017ರ ಆರಂಭದಲ್ಲಿ ಮುಂಬೈ ಪಾಸ್‌ಪೋರ್ಟ್ ಕಚೇರಿಯಿಂದ ಚೋಕ್ಸಿ ಪ್ರಮಾಣಪತ್ರ ಪಡೆದಿದ್ದು, ಅದರಲ್ಲಿ ಆತನಿಗೆ ಪ್ರತಿಕೂಲವಾದ ಯಾವುದೇ ಅಂಶಗಳನ್ನು ನಮೂದಿಸಿಲ್ಲ. ಅಲ್ಲದೆ ಚೋಕ್ಸಿ ಆ್ಯಂಟಿಉಗವಾ ದೇಶದ ಪೌರತ್ವ ಪಡೆದಿದ್ದು, ಭಾರತ ಸರಕಾರ ಚೋಕ್ಸಿ ವಿಷಯದಲ್ಲಿ ತನ್ನನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಆ ದೇಶದ ಪ್ರಧಾನಿ ತಿಳಿಸಿದ್ದಾರೆ. 2018ರ ಎಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಆ್ಯಂಟಿಗ ದೇಶದ ಪ್ರಧಾನಿಯನ್ನು ಭೇಟಿಯಾಗಿದ್ದರು. ಆಗ ಕೂಡಾ ಅವರು ಚೋಕ್ಸಿ ಬಗ್ಗೆ ಚಕಾರವೆತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹವಾಗಿದೆ ಎಂದು ಖೇರ ಹೇಳಿದ್ದಾರೆ. ಮೆಹುಲ್ ಚೋಕ್ಸಿ ಆರ್ಥಿಕ ವಂಚನೆ ಎಸಗಿರುವುದನ್ನು ತಿಳಿದಿದ್ದರೂ ಪ್ರಧಾನಮಂತ್ರಿ ಕಚೇರಿ ನಿಗೂಢ ಮೌನ ವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News