ಸೆ.1: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭ

Update: 2018-08-29 17:11 GMT

ಮಂಗಳೂರು, ಆ. 29: ಭಾರತೀಯ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪ್ರಾರಂಭಿಸಲಾಗಿದ್ದು, ಇದರ ಮಂಗಳೂರು ಶಾಖೆ ಸೆಪ್ಟೆಂಬರ್ 1 ರಂದು ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ಉಪವಿಭಾಗದ ಅಂಚೆ ಹಿರಿಯ ಅಧೀಕ್ಷಕ ಪೋಸ್ಟ್‌ಮಾಸ್ಟರ್ ದಿವಾಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.1ರಂದು ದೇಶಾದ್ಯಂತ ಈ ಸೇವೆಗೆ ಚಾಲನೆ ನೀಡಲಾಗುತ್ತಿದ್ದು,ಮಂಗಳೂರು ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಂಗಳೂರು ಶಾಖೆಯನ್ನು ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಬಲ್ಮಠ ಶಾಖೆಯಲ್ಲಿ ಈ ಸೌಲಭ್ಯ ಪ್ರಾರಂಭಿಸಲಾಗಿದೆ. ಅಲ್ಲದೆ ಬಲ್ಮಠ, ಕಾಟಿಪಳ್ಳ, ಕುತ್ತೆತ್ತೂರು, ಸೂರಿಂಜೆಯಲ್ಲಿ ಆಕ್ಸೆಸ್ ಪಾಯಿಂಟ್‌ಗಳನ್ನೂ ರೂಪಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಎರಡನೇ ಹಂತದಲ್ಲಿ ಪ್ರಾರಂಭಗೊಳ್ಳಲಿದೆ. ಸದ್ಯ ಜಿಲ್ಲೆಯಲ್ಲಿ 542 ಮಂದಿಯಷ್ಟೇ ಖಾತೆ ತೆರೆದಿದ್ದಾರೆ ಎಂದವರು ತಿಳಿಸಿದರು.

ಕೇಂದ್ರ ಸರ್ಕಾರದ ಶೇ.100 ಸ್ವಾಮ್ಯ ಹೊಂದಿರುವ ಈ ಬ್ಯಾಂಕ್ ಜನಸಾಮಾನ್ಯರ ಕೈಗೆಟಕುವ ಸರಳ ವ್ಯವಹಾರ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ವ್ಯವಸ್ಥೆ ನಿರ್ಮಾಣದ ಗುರಿಯನ್ನು ಹೊಂದಿದೆ. ಬ್ಯಾಂಕಿಂಗ್ ವ್ಯವಸ್ಥೆಯ ತಂತ್ರಜ್ಞಾನ ಬಳಸಿಕೊಂಡು ಕೌಂಟರ್, ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಇತ್ಯಾದಿ ವ್ಯವಸ್ಥೆ, ಗ್ರಾಹಕರಿಗೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಸಂದಾಯ, ಹಣ ವರ್ಗಾವಣೆ, ಲಾನುಭವಿಗಳಿಗೆ ನೇರ ವರ್ಗಾವಣೆ ವ್ಯವಸ್ಥೆ, ಬಿಲ್ ಪಾವತಿ, ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಹಣಪಾವತಿ ಸೇವೆಯನ್ನು ಒದಗಿಸಲಾಗುತ್ತದೆ.

ಅಂಚೆ ಇಲಾಖೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವಿಸ್ತಾರ ಜಾಲ ಹೊಂದಿದ್ದು, ಪೋಸ್ಟ್‌ಮ್ಯಾನ್, ಗ್ರಾಮೀಣ ಡಾಕ್ ಸೇವಕ್ ಮತ್ತಿತರ ಸಿಬ್ಬಂದಿಗಳ ಮೂಲಕ ಮನೆ ಮನೆಗೆ ಬ್ಯಾಂಕಿಂಗ್ ಸೌಲಭ್ಯ ತಲಪಿಸುವ ವ್ಯವಸ್ಥೆ ಮಾಡಲಾಗಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಬಳಸುವ ಮೂಲಕ ಗ್ರಾಹಕರು ಬಯೋಮೆಟ್ರಿಕ್ ತಂತ್ರಜ್ಞಾನ ಹಾಗೂ ಒಟಿಪಿ ಪಡೆದು ಸರಳವಾಗಿ ವ್ಯವಹಾರ ನಡೆಸಬಹುದು ಎಂದವರು ವಿವರಿಸಿದರು.

ಪ್ರತಿ ಗ್ರಾಹಕನಿಗೆ ಕ್ಯೂಆರ್ ಕಾರ್ಡ್ ನೀಡಲಾಗುವುದು. ಇದು ಖಾತೆಯ ಮಾಹಿತಿಯನ್ನೊಳಗೊಂಡಿರುತ್ತದೆ. ವಿದ್ಯಾರ್ಥಿಗಳು, ಗೃಹಿಣಿಯರು, ನಗರಕ್ಕೆ ವಲಸೆ ಬಂದವರು, ರೈತರು, ಕಾರ್ಮಿಕರು, ಸರ್ಕಾರದ ಯೋಜನೆ ಲಾನುಭವಿಗಳು, ಗ್ರಾಮೀಣ ವ್ಯಾಪಾರಿಗಳು, ಕಿರಾಣಿ ಅಂಗಡಿ ವರ್ತಕರು, ಸಣ್ಣ ಉದ್ಯಮಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ಉದ್ದೇಶವನ್ನು ಹೊಂದಿದೆ ಎಂದರು.

ಪುತ್ತೂರಿನ ಹಿರಿಯ ಅಧೀೀಕ್ಷಕ ಪೋಸ್ಟ್‌ಮಾಸ್ಟರ್ ಜಗದೀಶ ಪೈ, ಸ್ಪೀಡ್ ಪೋಸ್ಟ್ ಮ್ಯಾನೇಜರ್ ಜೋಸ್ೆ ರಾಡ್ರಿಗಸ್, ಸಹಾಯಕ ಅಧೀಕ್ಷಕ ಪೋಸ್ಟ್‌ ಮಾಸ್ಟರ್ ಲಕ್ಷ್ಮೀನಾರಾಯಣ, ಹಾಗೂ ಬಿ.ದಿನೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News