ಹೈನುಗಾರಿಕೆಯಿಂದ ಜೀವನ ನಡೆಸಬಹುದು: ಲಾಲಾಜಿ

Update: 2018-08-29 17:19 GMT

ಪಡುಬಿದ್ರಿ, ಆ. 29: ಹೈನುಗಾರಿಕೆಯಿಂದ ಮಧ್ಯಮ ವರ್ಗದ ಕುಟುಂಬವೊಂದು ಉತ್ತಮವಾಗಿ ಜೀವನ ನಡೆಸಬಹುದು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ವಿಶೇಷ ಕೇಂದ್ರಿಯ ನೆರವಿನಡಿಯಲ್ಲಿ ಗಿರಿಜನ ಉಪಯೋಜನೆ ಮತ್ತು ಎಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಎಲ್ಲೂರಿನಲ್ಲಿ ನಿರ್ಮಾಣವಾದ ಸಾಂದ್ರ ಹಾಲು ಶೀತಲೀಕರಣ ಘಟಕ ಹಾಗೂ ಬೆಳ್ಳಿಹಬ್ಬದ ಸ್ಮಾರಕ ಸಭಾಭವನ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರವೂ ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಸಾದು ಪ್ರಾಣಿಯಾಗಿರುವ ದನದಿಂದ ಉತ್ಪಾದನೆಯಾಗುವ ಎಲ್ಲಾ ವಸ್ತುಗಳು ಆದಾಯ ತರುತ್ತದೆ. ಒಂದು ಕಾಲದಲ್ಲಿ ಬೀಡಿ ಉದ್ಯಮ ಪ್ರಬಲವಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಬೇಡಿಕೆ ಇದೆ. ಸಾವಿರದಿಂದ ಎರಡು ಸಾವಿರ ಜನ ದನ ಸಾಕಾಣೆ ಮಾಡುತ್ತಿದ್ದು, ನಾಲ್ಕೂವರೆ ಲಕ್ಷ ಲೀಟರ್ ಹಾಲು ಉಡುಪಿ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದೆ ಎಂದರು. 

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಮಾತನಾಡಿ, ಸೈನಿಕರಿಗೆ ನೀಡುವ ಮಹತ್ವ ಹೈನುಗಾರರಿಗೆ ನೀಡಬೇಕಿದೆ. ಹಸು ಜೀವನದಲ್ಲಿ ಶಿಸ್ತು ಕಲಿಸುತ್ತದೆ. ಹಾಲಿನ ಗುಣಮಟ್ಟವೃದ್ಧಿಗೆ ಉತ್ತಮ ತಳಿಯ ಹಸುಗಳನ್ನು ಸಾಕಾಣೆ ಮಾಡಬೇಕು. ಹಾಲಿನ ತಾಜಾತನ ಉಳಿಸಲು ಶೀತಲೀಕರಣ ವ್ಯವಸ್ಥೆ ಮಾಡಲಾಗುತ್ತಿದ್ದು, ಒಕ್ಕೂಟದಿಂದ ನಿರ್ಮಾಣವಾಗಿರುವ 108 ನೇ ಶೀತಲೀಕರಣ ಘಟಕ ಇದಾಗಿದೆ. ಹಾಲಿನ ಗುಣಮಟ್ಟ ಕಾಪಾಡುವಲ್ಲಿ ಸದಸ್ಯರೂ ಸಹಕಾರ ನೀಡಬೇಕು ಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಾನಿ-ಯುಪಿಸಿಎಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ನಂತರ ಮಾತನಾಡಿದರು.

ಎಲ್ಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವೈ. ಸೀತಾರಾಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಲ್ಲೂಕು ಪಂ. ಸದಸ್ಯ ಕೇಶವ ಮೊಯ್ಲಿ, ಎಲ್ಲೂರು ಗ್ರಾಮ ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ದಿವಾಕರ ಶೆಟ್ಟಿ ಕಾಪು, ಜಾನಕಿ ಹಂದೆ, ಅಶೋಕ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ. ಸತ್ಯನಾರಾಯಣ, ವಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕರಾದ ಡಾ. ಅನಿಲ್‍ಕುಮಾರ್ ಶೆಟ್ಟಿ, ಉಪೇಂದ್ರ, ಲಕ್ಕಪ್ಪ, ಯುಪಿಸಿಎಲ್ ಏಜಿಎಂ ಗಿರೀಶ್ ನಾವಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ್ ಪಿ.ಕೆ., ಎಲ್ಲೂರು ವಿಶ್ವೇಶರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಪ್ರಪುಲ್ಲ ಶೆಟ್ಟಿ ಉಪಸ್ಥಿತರಿದ್ದರು.

ಎಲ್ಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ವರದಿ ವಾಚಿಸಿದರು. ಕಂಪ್ಯೂಟರ್ ಆಪರೇಟರ್ ಮಮತಾ ಸುವರ್ಣ ಸ್ವಾಗತಿಸಿದರು. ಗಣೇಶ್ ರಾವ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News