ಬಂಟ್ವಾಳ: ಕಾಂಗ್ರೆಸ್ 3ನೆ ಸ್ಥಾನಕ್ಕೆ ಬಂದಲ್ಲಿ ಎಲ್ಲ ಘಟಕದ ನಾಯಕರಿಂದ ರಾಜಕೀಯ ನಿವೃತ್ತಿ; ಜಗದೀಶ್ ಕೊಯಿಲ

Update: 2018-08-29 17:23 GMT

ಬಂಟ್ವಾಳ, ಆ. 29: ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ಬರುವುದೇ ನಿಜವಾದರೆ ಸುದ್ದಿಗೋಷ್ಠಿಯಲ್ಲಿರುವ ಪಕ್ಷದ ಎಲ್ಲ ಘಟಕದ ನಾಯಕರು ರಾಜಕೀಯ ನಿವೃತ್ತಿ ಸ್ವೀಕರಿಸಲು ಸಿದ್ಧ ಎಂದು ಕಾಂಗ್ರೆಸ್ ವಕ್ತಾರ ಜಗದೀಶ್ ಕೊಯಿಲ ಹೇಳಿದ್ದಾರೆ.

ನರಿಕೊಂಬು ಗ್ರಾಮದಲ್ಲಿರುವ ಅಡಿಟೋರಿಯಂವೊಂದರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪರ ವಾತಾವರಣವಿದ್ದು, ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದ ಅವರು, ಹರಿಕೃಷ್ಣ ಬಂಟ್ವಾಳ ಅವರು ಹೇಳಿದಂತೆ ಕಾಂಗ್ರೆಸ್‍ಗೆ ಮೂರನೆ ಸ್ಥಾನಕ್ಕೆ ಬರುವುದೇ ನಿಜವಾದರೆ ಸುದ್ದಿಗೋಷ್ಠಿಯಲ್ಲಿರುವ ಪಕ್ಷದ ಎಲ್ಲ ನಾಯಕರು ರಾಜಕೀಯ ನಿವೃತ್ತಿ ಸ್ವೀಕರಿಸುತ್ತೇವೆ. ಒಂದು ವೇಳೆ ಸುಳ್ಳಾದರೆ ಬಿಜೆಪಿ ನಾಯಕರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ? ಎಂದು ಸವಾಲು ಹಾಕಿದರು. 

ಬಂಟ್ವಾಳ ಪುರಸಭೆಯಲ್ಲಿ ಕಳೆದ ಐದು ವರ್ಷದಲ್ಲಿ ನಡೆದಿದೆಯನ್ನಲಾದ ಹಗರಣದ ಬಗ್ಗೆ ತನಿಖೆಗೆ ಕಾಂಗ್ರೆಸ್ ಸಿದ್ಧವಿದೆ. ಆದರೆ, ಪುರಸಭೆಯಲ್ಲಿ ಈ ಹಿಂದೆ ಬಿಜೆಪಿ ಆಡಳಿತ ಕಾಲದಲ್ಲಿ ಆಗಿರುವ ಎಲ್ಲ ಹಗರಣಗಳು ಕೂಡ ತನಿಖೆಯಾಗಬೇಕು ಎಂದ ಅವರು, ಇದೀಗ ಬಿಜೆಪಿ ಅಪಪ್ರಚಾರದ ಮೂಲಕ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದರು.    

ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ದಿ ಕೆಲಸಗಳಾಗಿದ್ದು, ಇದನ್ನು ಸಹಿಸದ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್‍ನಿಂದ ಉಚ್ಛಾಟಿಸಲ್ಪಟ್ಟ ಹರಿಕೃಷ್ಣ ಬಂಟ್ವಾಳ್, ಈಗ ಬಿಜೆಪಿಯಲ್ಲಿ ತನ್ನ ಅಸ್ತಿತ್ವಕ್ಕಾಗಿ ಇಂತಹ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಉಪಸ್ಥಿತರಿದ್ದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು, ಬಿಜೆಪಿಯ ಎಲ್ಲ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಂಜುಳಾ ಮಾವೆ,ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಪಕ್ಷದ ಮುಖಂಡರಾದ ರಾಜಶೇಖರ ಕೋಟ್ಯಾನ್, ಬೇಬಿ ಕುಂದರ್, ರಾಜಶೇಖರ ನಾಯಕ್, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News