ಹಿಂದೂಗಳು ಮೋದಿ – ಫಡ್ನವೀಸ್ ಆಡಳಿತದಲ್ಲಿ ಉಗ್ರರು ಎಂದು ಬ್ರಾಂಡ್ ಆಗುತ್ತಿದ್ದಾರೆ: ಶಿವಸೇನೆ

Update: 2018-08-30 14:19 GMT

ಮುಂಬೈ, ಆ. 30: ತನ್ನ ಮಿತ್ರ ಪಕ್ಷವಾಗಿರುವ ಬಿಜೆಪಿಯನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಬಿಜೆಪಿ ಪ್ರತಿಪಕ್ಷವಾಗಿರುವಾಗ ‘ಹಿಂದೂ ಭಯೋತ್ಪಾದನೆ’ ಪದದ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಸರಕಾರ ನಡೆಸುತ್ತಿರುವಾಗ ಅದು ಜನರನ್ನು ‘ಹಿಂದೂ ಭಯೋತ್ಪಾದಕರು’ ಎಂದು ಬ್ರಾಂಡ್ ಮಾಡುತ್ತಿದೆ ಹಾಗೂ ಅವರನ್ನು ನಾಶ ಮಾಡುವ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಅಚ್ಚರಿಯ ವಿಚಾರ ಎಂದಿದೆ.

‘ಹಿಂದೂ ಭಯೋತ್ಪಾದನೆ’ ಪದದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವನ್ನು ಶಿವಸೇನೆ ಆಗ್ರಹಿಸಿದೆ. ಕಾಂಗ್ರೆಸ್ ಈ ‘ಹಿಂದೂ ಭಯೋತ್ಪಾದನೆ’ ಪದವನ್ನು ಪರಿಚಯಿಸಿತ್ತು. ಈ ಸಂದರ್ಭ ಸಂಸತ್ತಿನಲ್ಲಿ ಬಿಜೆಪಿ ಕೋಲಾಹಲ ಎಬ್ಬಿಸಿತ್ತು ಹಾಗೂ ಬೀದಿಯಲ್ಲಿ ಪ್ರತಿಭಟನೆ ನಡೆಸಿತ್ತು ಎಂದು ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಹೇಳಿದೆ. ಪ್ರಸ್ತುತ ಕೇಂದ್ರದಲ್ಲಿರುವ ಹಾಗೂ ಮಹಾರಾಷ್ಟ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ‘ಹಿಂದೂ ಭಯೋತ್ಪಾದನೆ’ ಬಗ್ಗೆ ಮಾತನಾಡುತ್ತಿದೆ. ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಶಿವಸೇನೆ ಹೇಳಿದೆ.

‘‘ಪ್ರತಿಯೊಬ್ಬ ಹಿಂದೂ ಭಯೋತ್ಪಾದರನ್ನು ನಿರ್ಮೂಲನೆ ಮಾಡಬೇಕು ಎಂದು ಸರಕಾರ ನಿರ್ಧರಿಸಿದೆ. ಹಿಂದೂಗಳು ತಮ್ಮದೇ ಹಿಂದೂಸ್ಥಾನದಲ್ಲಿ ಹಾಗೂ ಅತಿ ಮುಖ್ಯವಾಗಿ ಮೋದಿ-ಫಡ್ನವೀಸ್ ಆಡಳಿತದಲ್ಲಿ ಭಯೋತ್ಪಾದಕರು ಎಂದು ಬ್ರಾಂಡ್ ಆಗುತ್ತಿದ್ದಾರೆ. ಇದು ಅಚ್ಚರಿಯ ವಿಚಾರ’’ ಎಂದು ಸಂಪಾದಕೀಯ ಹೇಳಿದೆ. ಇತ್ತೀಚೆಗೆ ಮಹಾರಾಷ್ಟ್ರ ಎಟಿಎಸ್ ಹಾಗೂ ಸಿಬಿಐ ಸನಾತನ ಸಂಸ್ಥೆ ಕುರಿತು ಸಹಾನುಭೂತಿ ಉಳ್ಳ ಆರು ಮಂದಿಯನ್ನು ಬಂಧಿಸಿತ್ತು ಹಾಗೂ ಇವರು ಡಾ. ನರೇಂದ್ರ ದಾಭೋಲ್ಕರ್, ಎಂ.ಎಂ. ಕಲುಬುರ್ಗಿ, ಗೋವಿಂದ ಪಾನ್ಸರೆ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News