×
Ad

ಬಂಟ್ವಾಳ ಚುನಾವಣೆ: ಮಿನಿವಿಧಾನ ಸೌಧಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡ ಡಿಸಿ

Update: 2018-08-30 19:58 IST

ಬಂಟ್ವಾಳ, ಆ. 30: ಆ. 31ರ  ಬೆಳಗ್ಗೆ 7 ಗಂಟೆಯಿಂದ ಆರಂಭಗೊಳ್ಳುವ ಚುನಾವಣೆಯ ಮಸ್ಟರಿಂಗ್ ಕಾರ್ಯ ಗುರುವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಅವರು ಬೆಳಿಗ್ಗೆ ಬಿ.ಸಿ.ರೋಡಿನ ಮಿನಿವಿಧಾನ ಸೌಧಕ್ಕೆ ಆಗಮಿಸಿ, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಮತ್ತು ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಂದ ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.

ಈ ಬಂಟ್ವಾಳ ಚುನಾವಣಾಧಿಕಾರಿಗಳಾದ ರಾಜೇಶ್, ಕೆ. ಮೋಹನ್ ಕುಮಾರ್, ನೋಣಯ್ಯ ನಾಯ್ಕ್, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಚುನಾವಣಾ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ವಿನಯ ನಾಗರಾಜ್, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು. ಚುನಾವಣಾ ವೀಕ್ಷಕ ಕನಕರಾಜು ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.

ಇದೇ ವೇಳೆ ಬಂಟ್ವಾಳ ಪುರಸಭೆಯ 27 ವಾರ್ಡುಗಳ 32 ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ಮತದಾನ ಪ್ರಕ್ರಿಯೆಗೆ ಬೇಕಾದ ಇವಿಎಂ ಯಂತ್ರಗಳ ಸಹಿತ ನಾನಾ ಸಿದ್ಧತೆಗಳನ್ನು ಪರಿಶೀಲಿಸಿ ತಮ್ಮ ಬೂತ್‍ಗಳಿಗೆ ತೆರಳಿದರು.

ಅಧಿಕಾರಿಗಳ ನಿಯೋಜನೆ:

ಪ್ರತಿಯೊಂದು ಮತಗಟ್ಟೆಗೆ ಓರ್ವ ಮತಗಟ್ಟೆ ಅಧಿಕಾರಿ (ಪಿಆರ್‍ಒ), ಓರ್ವ ಎಪಿಆರ್‍ಒ, ಇಬ್ಬರು ಪಿಒ, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಡಿ-ಗ್ರೂಪ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆಗೆ ಸಂಬಂಧಿಸಿ ಮೂವರು ಚುನಾವಣಾಧಿಕಾರಿಗಳು, ಮೂವರು ಸಹಾಯಕ ಚುನಾವಣಾಧಿಕಾರಿಗಳು, ಮೂವರು ಸೆಕ್ಟರ್ ಅಧಿಕಾರಿಗಳು, ಮೂವರು ಕಂದಾಯ ನಿರೀಕ್ಷಕರುಗಳು, ಆರು ಮಂದಿ ಗ್ರಾಮ ಕರಣೀಕರುಗಳು ಹಾಗೂ ಗ್ರಾಮ ಸಹಾಯಕರುಗಳು ಕಾರ್ಯನಿರ್ವಹಿಸಲಿದ್ದಾರೆ.

27 ವಾರ್ಡು, 32 ಮತಗಟ್ಟೆ:

ಬಂಟ್ವಾಳ ಪುರಸಭೆಯಲ್ಲಿ ಒಟ್ಟು 27 ವಾರ್ಡುಗಳಿದ್ದು, 32 ಮತಗಟ್ಟೆಗಳು ಇವೆ. ಅವುಗಳಲ್ಲಿ 14 ಅತಿ ಸೂಕ್ಷ್ಮ ಮತ್ತು 18 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 34,102 ಮತದಾರರಿದ್ದು 16,847 ಪುರುಷರು ಮತ್ತು 17,255 ಮಹಿಳೆಯರು ಮತ ಚಲಾಯಿಸಲಿದ್ದಾರೆ.

ಅನೇಕ ಸೊಸೈಟಿಗಳ ಮತದಾನ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಗುರುತಿನ ಶಾಯಿಯನ್ನು ಬಲಕೈಯ ಹೆಬ್ಬೆರಳಿಗೆ ಹಾಕಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

 ಬಂದೋಬಸ್ತ್:

ಬಂಟ್ವಾಳ ಎಎಸ್ಪಿ ರಿಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಆರು ಮಂದಿ ಎಸ್ಸೈಗಳು ಬಂದೋಬಸ್ತ್ ಜವಾಬ್ದಾರಿ ವಹಿಸಿದ್ದಾರೆ. 32 ಮತಗಟ್ಟೆಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಬ್ಬ ಪಿಎಸ್ಸೈ ಜವಾಬ್ದಾರಿ ವಹಿಸುತ್ತಿದ್ದಾರೆ. 3 ಕೆಎಸ್ಸಾಆರ್‍ಪಿ, ಒಂದು ಡಿಎಆರ್, ಸ್ಟ್ರೈಕಿಂಗ್ ಪೊಲೀಸ್ ಹೆಚ್ಚುವರಿಯಾಗಿ ಬಂದಿವೆ. ಅವಲ್ಲದೆ ಅಡ್ಡಮತದಾನ ಸಂದೇಹವಿರುವ ಬೂತ್‍ಗಳಲ್ಲೂ ತೀವ್ರ ನಿಗಾ ವಹಿಸಲಾಗುತ್ತಿದೆ.

ಪ್ರತಿ ವಾರ್ಡ್‍ನಲ್ಲಿ ಮಹಿಳಾ ಮತದಾರರನ್ನು ನಿಭಾಯಿಸಲು ಓರ್ವ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶಾಂತಿಯುತ ಮತದಾನಕ್ಕೆ ಹೆಚ್ಚಿನ ಬಂದೋಬಸ್ತ್ ಕಾರ್ಯಗಳನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಯಲಿದೆ.
ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ 

ಚುನಾವಣೆಗೆ ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಯಾವುದೇ ಬೂತ್‍ಗಳಲ್ಲಿ ಗೊಂದಲಗಳ ನಡೆಯದಂತೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಕೆಲವೊಂದು ವಾರ್ಡ್‍ಗಳಲ್ಲಿ ಅಡ್ಡ ಮತದಾನ ಮಾಡುವ ಬಗ್ಗೆ ದೂರುಗಳು ಬಂದಿದ್ದು, ಹೆಚ್ಚಿನ ನಿಗಾ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News