ಪುತ್ತೂರು ನಗರಸಭಾ ಚುನಾವಣೆ: 31 ವಾರ್ಡ್‍ಗಳಿಗೆ 41 ಮತಗಟ್ಟೆ

Update: 2018-08-30 14:39 GMT

ಪುತ್ತೂರು, ಆ. 30: ಇಲ್ಲಿನ ನಗರಸಭೆಗೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಗುರುವಾರ ಪುತ್ತೂರು ಮಿನಿ ವಿಧಾನಸೌಧದ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ಹಾಗೂ ಚುನಾವಣಾ ಸಿಬಂದಿಗೆ ಮಾಹಿತಿ ಕಾರ್ಯಕ್ರಮ ಗುರುವಾರ ತಹಶೀಲ್ದಾರ್ ಅನಂತಶಂಕರ್ ನೇತೃತ್ವದಲ್ಲಿ ನಡೆಯಿತು.

ಪುತ್ತೂರು ನಗರಸಭೆಯಲ್ಲಿ ಒಟ್ಟು 77 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಬಿಜೆಪಿಯಿಂದ 31, ಕಾಂಗ್ರೆಸ್‍ನಿಂದ 31, ಜೆಡಿಎಸ್‍ನಿಂದ 9, ಎಸ್‍ಡಿಪಿಐನಿಂದ 3, ಬಿಎಸ್‍ಪಿಯಿಂದ 1, ಪಕ್ಷೇತರರು ಇಬ್ಬರು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ. 20,149 ಮಹಿಳೆಯರು ಹಾಗೂ 19596 ಪುರುಷರು ಸೇರಿದಂತೆ ಒಟ್ಟು 39,745 ಮತದಾರರು ಮತಚಲಾವಣೆಯ ಅವಕಾಶವನ್ನು ಹೊಂದಿದ್ದಾರೆ. 

ಚುನಾವಣೆಯ ಹಿನ್ನೆಲೆಯಲ್ಲಿ 31 ವಾರ್ಡ್‍ಗಳಿಗೆ 41 ಬೂತ್‍ಗಳನ್ನು ರಚನೆ ಮಾಡಲಾಗಿದೆ. 10 ವಾರ್ಡ್‍ಗಳಲ್ಲಿ ತಲಾ ಎರಡು ಮತಗಟ್ಟೆಗಳಿದ್ದರೆ, ಉಳಿದ 21 ವಾರ್ಡ್‍ಗಳಲ್ಲಿ 21 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. 

ಪಾರದರ್ಶಕ ಹಾಗೂ ಶಾಂತಿಯುತ ಮತದಾನದ ನಿಟ್ಟಿನಲ್ಲಿ 27 ಸೂಕ್ಷ್ಮ ಮತಗಟ್ಟೆಗಳನ್ನು ಹಾಗೂ 14 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸುದಾನ ವಸತಿ ಶಾಲೆಯ (2 ಮತಗಟ್ಟೆ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಬನ್ನೂರು ಸ.ಹಿ.ಪ್ರಾ. ಶಾಲೆ (4), ಚಿಕ್ಕಮುಡ್ನೂರು ಕೃಷ್ಣನಗರ ಸ. ಹಿ.ಪ್ರಾ. ಶಾಲೆಯಲ್ಲಿ (3), ಜಿಡೆಕಲ್ಲು ಸ.ಹಿ.ಪ್ರಾ. ಶಾಲೆ, ಸಾಲ್ಮರ ಶಾಲೆ, ಹಾರಾಡಿ ಸ. ಹಿ.ಪ್ರಾ. ಶಾಲೆ (3), ಬೊಳುವಾರು ಸ. ಹಿ.ಪ್ರಾ. ಶಾಲೆ, ರಾಗಿಕುಮೇರು ಸ. ಹಿ.ಪ್ರಾ. ಶಾಲೆ (2), ಪೆರಿಯತ್ತೋಡಿ ಅಂಗನವಾಡಿ ಕೇಂದ್ರ, ಪರ್ಲಡ್ಕ ಸ.ಹಿ.ಪ್ರಾ. ಶಾಲೆ (2), ಸಂತ ಫಿಲೋಮಿನಾ ಶಾಲೆ (2), ಮರೀಲು ಅಂಗನವಾಡಿ ಕೇಂದ್ರ, ಸಂಜಯನಗರ ಸ.ಹಿ.ಪ್ರಾ. ಶಾಲೆ (2), ಮೊಟ್ಟೆತ್ತಡ್ಕ ಕೆಮ್ಮಿಂಜೆ ಶಾಲೆಯ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ.

ಒಟ್ಟು ನಗರಸಭಾ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 275 ಚುನಾವಣಾ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇದರಲ್ಲಿ 41 ಮಂದಿ ಪೆÇಲೀಸ್ ಸಿಬಂದಿ ಇರಲಿದ್ದಾರೆ. 3 ಮಂದಿ ಸೆಕ್ಟರ್ ಆಫೀಸರ್‍ಗಳನ್ನು ನೇಮಕ ಮಾಡಲಾಗಿದೆ. ಒಂದು ಬೂತ್‍ನಲ್ಲಿ ಓರ್ವ ಅಧ್ಯಕ್ಷಾ„ಕಾರಿ, 3 ಮಂದಿ ಸಹಾಯಕ ಅಧ್ಯಕ್ಷಾಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಪೆÇಲೀಸ್ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ.  ಮತಗಟ್ಟೆಗೆ ತೆರಳಲು ಅನುಕೂಲಕವಾಗುವಂತೆ 5 ಬಸ್ಸು, 4 ಮ್ಯಾಕ್ಸಿಕ್ಯಾಬ್ ಹಾಗೂ 2 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ. 

ನಗರಸಭಾ ಚುನಾವಣಾ ವ್ಯಾಪ್ತಿಯಲ್ಲಿ ಆ.31 ರಂದು ರಜೆ ಘೋಷಣೆಯಾಗಿದ್ದು, ಈ ವ್ಯಾಪ್ತಿಯ ಶಾಲಾ -ಕಾಲೇಜುಗಳು, ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಪುತ್ತೂರು ನಗರಸಭಾ ಚುನಾವಣೆಯಲ್ಲಿ ಮತದಾರರ ಬಲಗೈ ಹೆಬ್ಬೆರಳಿಗೆ ಅಳಸಲಾಗದ ಶಾಯಿ ಗುರುತನ್ನು ಹಚ್ಚಲಾಗುತ್ತದೆ. ಪ್ರಥಮ ಬಾರಿಗೆ ಇವಿಎಂ ಮತಯಂತ್ರ ಬಳಕೆ, ನೋಟಾ ಅವಕಾಶವನ್ನು ನೀಡಲಾಗಿದೆ. 

ಆ.31 ರಂದು ಸಂಜೆ ಡಿ ಮಸ್ಟರಿಂಗ್ ನಡೆಯಲಿದ್ದು,  ಸೆ. 3 ರಂದು ಮತ ಎಣಿಕೆಯು ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಲಿದೆ. 

ಚುನಾವಣೆಯ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕಮೀಷನರ್ ಹೆಚ್.ಕೆ. ಕೃಷ್ಣಮೂರ್ತಿ ಅವರು ಮತದಾರರಿಗೆ ಆಮಿಷ ಒಡ್ಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಪುತ್ತೂರು ನಗರಸಭೆಯಲ್ಲಿ ವಾರ್ಡ್ ವಿಂಗಡಣೆ, ಹೆಚ್ಚುವರಿ ವಾರ್ಡ್‍ಗಳ ಪರಿವರ್ತನೆ ಆಗಿರುವುದರಿಂದ ಕೆಲವು ಮತದಾರರ ಹೆಸರು ಬೇರೆ ವಾರ್ಡ್‍ಗಳಿಗೆ ತಪ್ಪಿ ಹೋಗಿತ್ತು. ಈ ಕುರಿತು ಸರಿಪಡಿಸಲು ಮತದಾರರಿಗೆ ಅವಕಾಶ ನೀಡಲಾಗಿತ್ತು. ಬಾಕಿಯಾಗಿರುವವರಿಗೆ ಈ ಹಂತದಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ಅವಕಾಶಗಳಿವೆ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News