ಸಾಮಾಜಿಕ ಹೋರಾಟಗಾರರ ಬಂಧನದಿಂದ ಪ್ರಜಾಪ್ರಭುತ್ವ ದುರ್ಬಲ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೋಧಾ

Update: 2018-08-30 15:23 GMT

ಹೊಸದಿಲ್ಲಿ, ಆ. 30: ಜನವರಿ 1ರಂದು ಸಂಭವಿಸಿದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕಿಂತ ಒಂದು ದಿನ ಮುನ್ನ ಪುಣೆಯಲ್ಲಿ ಎಲ್ಗಾರ್ ಪರಿಷದ್ ನಡೆಸಿದ ಸಭೆಗೆ ಮಾವೋವಾದಿ ನಂಟಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಐವರು ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರನ್ನು ಬಂಧಿಸಿರುವ  ಕ್ರಮವನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಹಿತ ಹಲವು ನಿವೃತ್ತ ನ್ಯಾಯಮೂರ್ತಿಗಳು ಖಂಡಿಸಿದ್ದಾರೆ.

ಸರಕಾರದ ಈ ಕ್ರಮ ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನ. ಇದು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿ. ಸಾಂವಿಧಾನಿಕ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಲೋಧಾ ಹೇಳಿದ್ದಾರೆ.

‘‘ಈ ವ್ಯಕ್ತಿಗಳನ್ನು ಯಾಕೆ ಬಂಧಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರಿಗೆ ನಕ್ಸಲ್ ಚಳವಳಿ ನಂಟು ಇದೆ ಹಾಗೂ ಕಳೆದ ವರ್ಷ ಡಿಸೆಂಬರ್ 31ರಂದು ನಡೆದ ಎಲ್ಗಾರ್ ಪರಿಷದ್‌ನ ಆಯೋಜಕರಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅವರಿಗೆ 8 ತಿಂಗಳ ಬಳಿಕ ಈ ಬಗ್ಗೆ ಅರಿವಾಯಿತೇ ? ನಾನು ಅವರನ್ನು ನೋಡಿಯೇ ಇಲ್ಲ. ಕೆಲವು ಸಮಯದ ಹಿಂದೆ ಕೆಲವರನ್ನು ಬಂಧಿಸಿದಾಗ ಒಬ್ಬರು ಮಹಿಳಾ ನ್ಯಾಯವಾದಿ ಕಾನೂನು ಸಲಹೆಗಾಗಿ ನನ್ನನ್ನು ಭೇಟಿಯಾಗಿದ್ದರು. ಬಂಧಿತರಿಗೆ ನಕ್ಸಲೀಯರೊಂದಿಗೆ ನಂಟು ಇರುವ ಬಗ್ಗೆ ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದು ಪೊಲೀಸರು ಅನಂತರ ಹೇಳಿದ್ದರು. ಈಗ ಪೊಲೀಸರು ಇನ್ನೊಂದು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ’’ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ 2017 ಡಿಸೆಂಬರ್ 31ರಂದು ಎಲ್ಗಾರ್ ಪರಿಷದ್ ಸಭೆ ಆಯೋಜಕರಲ್ಲಿ ಒಬ್ಬರಾಗಿರುವ ಪಿ.ಬಿ. ಸಾವಂತ್ ಹೇಳಿದ್ದಾರೆ. ಪೊಲೀಸರು ಸರಕಾರದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಭಾವಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ ?, ಈ ದೇಶದಲ್ಲಿ ಕಾನೂನು ಇದೆಯೇ ?, ಈ ದೇಶದಲ್ಲಿ ಪ್ರಜಾಪ್ರಭುತ್ವ ಅಥವಾ ಸಂವಿಧಾನ ಇದೆಯೇ ?, ನಾವು ಇದನ್ನು ಹೇಗೆ ವೌಲ್ಯ ಮಾಪನ ಮಾಡುವುದು ?, ದೇಶದ ಇತರ ಸಮಸ್ಯೆಗಳಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಾವಂತ್ ಹೇಳಿದ್ದಾರೆ. ದೇಶಾದ್ಯಂತ ಎಲ್ಗಾರ್ ಪರಿಷತ್‌ನ ಸಭೆಯಂತಹ ಹಲವು ಸಭೆಯನ್ನು ನಾವು ಆಯೋಜಿಸಲಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News