ಮಾನವ ಹಕ್ಕು ಹೋರಾಟಗಾರರ ಬಂಧನ: ಪ್ರಮುಖ ಆರೋಪಗಳು ಪೊಲೀಸ್ ಕಡತದಿಂದ ನಾಪತ್ತೆ !

Update: 2018-08-30 15:34 GMT

ಹೊಸದಿಲ್ಲಿ, ಆ.30: ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಐವರು ಮಾನವ ಹಕ್ಕುಗಳ ಹೋರಾಟಗಾರರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಬುಧವಾರ ಪುಣೆ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ಆದರೆ ಈ ಹೋರಾಟಗಾರರನ್ನು ಯಾಕೆ ಬಂಧಿಸಲಾಗಿದೆ ಎಂಬುದಕ್ಕೆ ನೀಡಲಾಗಿರುವ ದಾಖಲೆಯಲ್ಲಿ ಸದ್ಯ ಸರಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ನೀಡಿರುವ ಹದಿನಾರು ಕಾರಣಗಳಲ್ಲಿ ಒಂದು ಕೂಡಾ ಇಲ್ಲ ಎಂದು ಆಂಗ್ಲ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಮಾಧ್ಯಮಕ್ಕೆ ಸಿಕ್ಕಿರುವ ಪೊಲೀಸ್ ದಾಖಲೆಯಲ್ಲಿ, ಬಂಧಿತ ಎಲ್ಲ ಹೋರಾಟಗಾರರು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಯ ಸದಸ್ಯರಾಗಿದ್ದರು ಮತ್ತು ನಿಷೇಧಿತ ಗುಂಪಿನ ನಗರ ವಿಭಾಗಗಳನ್ನು ರಚಿಸಿದ್ದರು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ, ಆರೋಪಿಗಳು ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರು, ಮಾವೋವಾದಿಗಳಿಗೆ ಧನಸಹಾಯ ನೀಡುತ್ತಿದ್ದರು ಅಥವಾ ನೇಪಾಳದ ಮೂಲಕ ಶಸ್ತ್ರಾಸ್ತ್ರ ಪೂರೈಸುತ್ತಿದ್ದರು ಎಂದು ನ್ಯಾಯಾಲಯದಲ್ಲಿ ಮೌಖಿಕವಾಗಿ ಮತ್ತು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವಂಥ ಯಾವುದೇ ಆರೋಪಗಳನ್ನು ಸೇರಿಸಲಾಗಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.

ಜನವರಿಯಲ್ಲಿ ಭೀಮಾ -ಕೋರೆಗಾಂವ್‌ನಲ್ಲಿ ನಡೆದ ದಲಿತರು ಮತ್ತು ಮರಾಠರ ನಡುವಿನ ಹಿಂಸಾಚಾರದ ಬಗ್ಗೆಯೂ ಈ ದಾಖಲೆಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ವರದಿ ತಿಳಿಸಿದೆ. ಹೋರಾಟಗಾರರ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಐವರು ಹೋರಾಟಗಾರರಿಗೆ ಗೃಹಬಂಧನ ವಿಧಿಸುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು. ಈ ಬಂಧನವನ್ನು ತೀವ್ರವಾಗಿ ವಿರೋಧಿಸಿದ ಪ್ರಗತಿಪರರು ಹಾಗೂ ವಿರೋಧ ಪಕ್ಷಗಳು, ಭಿನ್ನಾಬಿಪ್ರಾಯಗಳನ್ನು ಅಡಗಿಸುವ ಸರಕಾರದ ಪ್ರಯತ್ನದ ಭಾಗವೇ ಈ ಬಂಧನ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News