ಉಡುಪಿ: ವಿಶ್ವ ಬಂಟರ ಸಮ್ಮಿಲನದ ಆಹ್ವಾನ ಪತ್ರಿಕೆ ಬಿಡುಗಡೆ
ಉಡುಪಿ, ಜು. 30: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಉಡುಪಿ ಜಿಲ್ಲೆಯ ಸಮಸ್ತ ಬಂಟರ ಸಂಘಗಳ ಸಹಯೋಗದಲ್ಲಿ ಸೆ. 9ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ‘ವಿಶ್ವ ಬಂಟರ ಸಮ್ಮಿಲನ-2018’ರ ಆಹ್ವಾನ ಪತ್ರಿಕೆಯನ್ನು ಇಂದು ಸಂಜೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಿಡುಗಡೆ ಗೊಳಿಸಿದರು.
ವಿಶ್ವಮಟ್ಟದ ಸಮಸ್ತ ಬಂಟರನ್ನು ಒಗ್ಗೂಡಿಸಿ ವಿಶ್ವ ಬಂಟರ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಮ್ಮ್ಞಿಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಬಾಲಿವುಡ್ ಹಾಗೂ ಕನ್ನಡ ಚಿತ್ರರಂಗದ ಬಹಳಷ್ಟು ತಾರೆಯರು ಸಹ ಈ ಒಂದು ದಿನದ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದವರು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮ್ಮೇಳನ ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಈ ಸಮ್ಮೇಳನ ದಲ್ಲಿ ವಿಶ್ವದಾದ್ಯಂತ ಇರುವ ಸುಮಾರು 15,000 ಬಂಟರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ದೇಶ-ವಿದೇಶಗಳಲ್ಲಿರುವ ನೂರಾರು ಮಂದಿ ಬಂಟ ಸಮುದಾಯದವರು ಭಾಗವಹಿಸುವ ‘ಅನಿವಾಸಿ-ಎನ್‌ಆರ್‌ಐ ಸಮ್ಮಿಲನ’, ‘ಬಂಟರ ರಾಜಕೀಯ ಸಮ್ಮೇಳನ’, ಗಡಿಪ್ರಧಾನರ ಸಮ್ಮಿಲನ, ‘ಬಂಟರ ಆರಾಧನೆ ಮತ್ತು ಆಚಾರ ವಿಚಾರಗಳು’ ಕುರಿತು ವಿಚಾರ ಮಂಥನವೂ ನಡೆಯಲಿದೆ ಎಂದರು.
ಜಗತ್ತಿನ ನಾನಾ ಭಾಗಗಳಲ್ಲಿ ನೆಲೆಸಿರುವ ಎಲ್ಲಾ ಬಂಟರನ್ನು, ಬಂಟರ ಸಂಘ ಗಳನ್ನು ಒಗ್ಗೂಡಿಸಿ ಎಲ್ಲರ ನಡುವೆ ಸಂವಾದ ಏರ್ಪಡಿಸುವುದು. ಬಂಟರ ಮೂಲ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಕರಾವಳಿಯ ಗ್ರಾಮೀಣ ಭಾಗದ ಬಂಟರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಐಕಳ ಹರೀಶ್ ಶೆಟ್ಟಿ ಮತ್ತು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಕೊಲಾಡಿ ಬಾಲಕೃಷ್ಣ ಶೆಟ್ಟಿ, ಸಮ್ಮೇಳನದ ಸಂಚಾಲಕ ಕಾಪು ಲೀಲಾಧರ ಶೆಟ್ಟಿ, ಉಡುಪಿ ಬಂಟರ ಸಂಘದ ಕಾರ್ಯದರ್ಶಿ ಮೋಹನ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಮನೋಹರ ಶೆಟ್ಟಿ ತೋನ್ಸೆ, ಪುರುಷೋತ್ತಮ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.