ಗುರ್ಮೆ, ಭಟ್ರತೋಟ ಸೇತುವೆ: ವಾಹನ ಸಂಚಾರ ನಿಷೇಧ
Update: 2018-08-30 22:11 IST
ಉಡುಪಿ, ಆ.30: ಕಾಪು ತಾಲೂಕು ಕಳತ್ತೂರು ಗ್ರಾಮದ ಗುರ್ಮೆ ಎಂಬಲ್ಲಿ ನಿರ್ಮಾಣವಾದ ಸೇತುವೆಯು ಇತ್ತೀಚಿನ ಭಾರೀ ಮಳೆಗೆ ಹಾನಿಗೊಳಗಾಗಿದ್ದು, ಕುಸಿಯುವ ಭೀತಿಯಲ್ಲಿದೆ ಹಾಗು ಉಳಿಯಾರಗೋಳಿ ಗ್ರಾಮದ ಭಟ್ರತೋಟ ಎಂಬಲ್ಲಿ ಇರುವ ಸೇತುವೆಯು ಭಾರಿ ಗಾಳಿ-ಮಳೆಯಿಂದಾಗಿ ಶಿಥಿಲಗೊಂಡು ಅಪಾಯದ ಸ್ಥಿತಿ ತಲುಪಿದೆ.
ಈ ರಸ್ತೆಯಲ್ಲಿ ದಿನವೂ ನೂರಾರು ವಾಹನಗಳು ಓಡಾಡುತ್ತಿದ್ದು, ಕಾಪು ಕಡೆಗೆ ಹೋಗುವ ಶಾಲಾ ವಾಹನಗಳು ಈ ಸೇತುವೆಯ ಮೇಲೆ ಹಾದು ಹೋಗುವು ದರಿಂದ ಮುಂಜಾಗೃತ ಕ್ರಮವಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಳತ್ತೂರು ಗ್ರಾಮದ ಗುರ್ಮೆ ಎಂಬಲ್ಲಿ ಇರುವ ಸೇತುವೆಯಲ್ಲಿ ಮುಂದಿನ ಆದೇಶದ ವರೆಗೆ ವಾಹನ ಸಂಚಾರ ನಿಷೇಧಿಸಿ, ಉಳಿಯಾರಗೋಳಿ ಗ್ರಾಮದ ಭಟ್ರತೋಟ ಎಂಬಲ್ಲಿ ಇರುವ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.