ನೋಟು ಅಮಾನ್ಯದ ಹಿಂದಿನ ಉದ್ದೇಶ ತಿಳಿಸಿದ ಜೇಟ್ಲಿ

Update: 2018-08-30 17:27 GMT

ಹೊಸದಿಲ್ಲಿ, ಆ.30: 2016ರ ನವಂಬರ್‌ನಲ್ಲಿ 500 ರೂ. ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಪರಿಣಾಮವಾಗಿ ಆರ್ಥಿಕತೆ ಉತ್ತಮಗೊಳ್ಳಲು, ತೆರಿಗೆ ಸಂಗ್ರಹ ಹೆಚ್ಚಾಗಲು ಮತ್ತು ಹೆಚ್ಚಿನ ಬೆಳವಣಿಗೆಗೆ ಕಾರಣವಾಗಿದೆ. ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿರುವ ಜೇಟ್ಲಿ, ನೋಟು ಅಮಾನ್ಯದ ಹಿಂದಿದ್ದ ಮೂಲ ಉದ್ದೇಶ ಭಾರತವನ್ನು ತೆರಿಗೆ ಕಟ್ಟದ ದೇಶದಿಂದ ತೆರಿಗೆ ಅನುಸರಿಸುವ ದೇಶವನ್ನಾಗಿ ಬದಲಾಯಿಸುವುದೇ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ನೋಟು ಅಮಾನ್ಯದ ಗುಣಾತ್ಮಕ ಪರಿಣಾಮಗಳಲ್ಲಿ, ವ್ಯವಸ್ಥೆಗೆ ಹೆಚ್ಚು ಹಣವನ್ನು ಸೇರಿಸಿದ್ದು, ಹೆಚ್ಚಿನ ವೆಚ್ಚ ಮತ್ತು ಮೊದಲ ಎರಡು ತ್ರೈಮಾಸಿಕಗಳ ನಂತರ ಹೆಚ್ಚಿನ ಬೆಳವಣಿಗೆ ಸೇರಿದೆ ಎಂದು ವಿತ್ತ ಸಚಿವರು ವಿವರಿಸಿದ್ದಾರೆ. ಅಮಾನ್ಯಗೊಂಡ ಶೇ.99.3 ನೋಟುಗಳು ವಾಪಸ್ ಚಲಾವಣೆಗೆ ಬಂದಿವೆ ಎಂದು ಆರ್‌ಬಿಐ ತನ್ನ 2017-18ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಜೇಟ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

2017-18ರಲ್ಲಿ 2,000 ರೂ.ನ ನಕಲಿ ನೋಟುಗಳ ಅತೀಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಅಮಾನ್ಯಗೊಂಡ ಬಹುತೇಕ ನೋಟುಗಳು ಅರ್ಥವ್ಯವಸ್ಥೆಯಲ್ಲಿ ವಾಪಸ್ ಸೇರಿವೆ ಎಂದ ಮಾತ್ರಕ್ಕೆ ನೋಟು ಅಮಾನ್ಯೀಕರಣದ ಮೂಲ ಉದ್ದೇಶ ವಿಫಲವಾಗಿದೆ ಎಂದರ್ಥವಲ್ಲ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. 2014ರ ಮಾರ್ಚ್‌ನಲ್ಲಿ 3.8 ಕೋಟಿಯಿದ್ದ ಆದಾಯ ತೆರಿಗೆ ನೋಂದಣಿ ಪ್ರಮಾಣ 2017-18ರಲ್ಲಿ 6.86 ಕೋಟಿಗೆ ಏರಿಕೆಯಾಗಿತ್ತು. ಇದೊಂದು ಅಭೂತಪೂರ್ವ ಏರಿಕೆ ಮತ್ತು ಇದಕ್ಕೆ ನೋಟು ರದ್ದತಿಯೇ ಕಾರಣ ಎಂದು ಜೇಟ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News