×
Ad

ಪತ್ನಿಯ ಶವ ಅಂತ್ಯಸಂಸ್ಕಾರ ನಡೆಸಲು ಚಿನ್ನಾಭರಣಕ್ಕೆ ಬೇಡಿಕೆ: ಆರೋಪ

Update: 2018-08-30 23:08 IST

ಮಂಗಳೂರು, ಆ. 30: ಬಾಣಂತಿ ಪತ್ನಿಯ ಶವ ಪಡೆದು ಅಂತ್ಯ ಸಂಸ್ಕಾರ ನಡೆಸಬೇಕಾದರೆ ಆಕೆಯ ಚಿನ್ನಾಭರಣಗಳನ್ನು ಮರಳಿ ನೀಡಬೇಕು ಎಂದು ಪತ್ನಿಯ ಪೋಷಕರ ಬಳಿ ಬೇಡಿಕೆ ಒಡ್ಡಿದ ಎನ್ನಲಾದ ಪತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಸಂದರ್ಭ ಪರಸ್ಪರ ಆರೋಪ-ಪ್ರತ್ಯಾರೋಪ ವ್ಯಕ್ತವಾಗಿ, ಕೊನೆಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಪ್ರಕರಣ ಸುಖಾಂತ್ಯಗೊಂಡಿದೆ.

ಕಾರ್ಕಳದ ಕಾಬೆಟ್ಟು ನಿವಾಸಿ ದೀಪಿಕಾ ಆಚಾರ್ಯ (27) ಮೃತ ಮಹಿಳೆ.

ಪ್ರಕಾಶ್ ಆಚಾರ್ಯ ಜತೆ 8 ತಿಂಗಳ ಹಿಂದೆ ಮೂಡುಬಿದಿರೆ ಗಂಟಲ್‌ಕಟ್ಟೆಯ ದೀಪಿಕಾರನ್ನು ವಿವಾಹ ಮಾಡಿಕೊಡಲಾಗಿತ್ತು. ಆನಂತರ ದೀಪಿಕಾ ಗರ್ಭಿಣಿಯಾಗಿದ್ದರು. ಏಳೂವರೆ ತಿಂಗಳು ತುಂಬಿದ ಕಾರಣ ಆ. 23ರಂದು ಸೀಮಂತ ಮಾಡಿ ತವರು ಮನೆಗೆ ಕಳುಹಿಸಲಾಗಿತ್ತು. ಆ. 24ರಂದು ರಾತ್ರಿ ದೀಪಿಕಾ ತವರು ಮನೆಯಲ್ಲಿ ತೀವ್ರ ಅನಾರೋಗ್ಯದಿಂದ ಕುಸಿದು ಬಿದ್ದಿದ್ದು, ಕೂಡಲೇ ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ತಂದು ಅಲ್ಲಿಂದ ನಗರದ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗರ್ಭಿಣಿಯ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟ ಕಾರಣ ಆ.25ರಂದು ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಯಿತು. ಗಂಡು ಮಗುವಾಗಿದ್ದು, ಆರೋಗ್ಯವಾಗಿದೆ. ಆದರೆ ಬಾಣಂತಿಗೆ ಹೆಚ್ಚಿನ ಚಿಕಿತ್ಸೆ ಅನಿವಾರ್ಯವಿದ್ದ ಕಾರಣ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆ. 29ರಂದು ರಾತ್ರಿ 10:55ಕ್ಕೆ ದೀಪಿಕಾ ಮೃತಪಟ್ಟಿದ್ದಾರೆ ಮೂಲಗಳು ತಿಳಿಸಿವೆ.

ಪರಸ್ಪರ ವಾಗ್ವಾದ

ದೀಪಿಕಾ ಮೃತಪಟ್ಟ ಬಳಿಕ ಆಕೆಯ ಗಂಡನ ಕಡೆಯವರು ಮೃತದೇಹವನ್ನು ಕೊಂಡೊಯ್ಯಬೇಕಾದರೆ ಆಕೆಯ ಎಲ್ಲ ಚಿನ್ನಾಭರಣ ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದು ದೀಪಿಕಾ ಪೋಷಕರು, ಸಹೋದರರ ಅಸಮಾಧಾನಕ್ಕೆ ಕಾರಣವಾಗಿದ್ದು, ‘ಪತ್ನಿಯ ಶವವಿಟ್ಟುಕೊಂಡು ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿರುವುದು ಎಷ್ಟು ಸರಿ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎರಡು ತಂಡಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ.

ಪ್ರಕರಣ ಸುಖಾಂತ್ಯ:

ಆಸ್ಪತ್ರೆಯ ಬಳಿ ಎರಡು ತಂಡಗಳ ಮಧ್ಯೆ ವಾಕ್ಸಮರ ನಡೆಯುತ್ತಿರುವ ಬಗ್ಗೆ ವಿಷಯ ತಿಳಿದ ಪಾಂಡೇಶ್ವರ ಪೊಲೀಸರು ಆಸ್ಪತ್ರೆ ಆವರಣಕ್ಕೆ ದೌಡಾಯಿಸಿ ದ್ದಾರೆ. ಬಳಿಕ ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಘಟನೆಯ ವಿವರ ಪಡೆದ ಪೊಲೀಸರು ಬಳಿಕ ಸಂಧಾನ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News