ಶಿರಾಡಿ ಘಾಟ್ ಸಮಸ್ಯೆ ಪರಿಹಾರಕ್ಕೆ ಪೇಸ್ ವರದಿ: ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲು ಸಲಹೆ
ಪುತ್ತೂರು, ಆ. 30: ಶಿರಾಡಿ ಘಾಟ್ ರಸ್ತೆಯ ಈಗಿನ ಸ್ಥಿತಿಯ ಕುರಿತು ಸ್ವ ವೀಕ್ಷಣೆ ನಡೆಸಿ ಸಮಸ್ಯೆಗಳ ಪರಿಹಾರಗಳಿಗಾಗಿ ಹಲವಾರು ಮಾರ್ಗಸೂಚಿಗಳನ್ನು ವರದಿ ರೂಪದಲ್ಲಿ ತಯಾರಿಸಿ ಸಂಬಂಧಿಸಿದವರಿಗೆ ಸಲಹೆ ನೀಡಿರುವ ಪುತ್ತೂರಿನ ಅಸೋಸಿಯೇಟ್ಸ್ ಆಫ್ ಸಿವಿಲ್ ಎಂಜಿನಿಯರ್(ಪೇಸ್) ತಂಡ ಶಿರಾಡಿ ಘಾಟ್ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಪಡೆ ನಿಯೋಜಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ ಸಲಹೆ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಂಕರ್ ಭಟ್ ಕೆ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಸೋಸಿಯೇಟ್ಸ್ ಆಫ್ ಸಿವಿಲ್ ಎಂಜಿನಿಯರ್ ಸಂಸ್ಥೆಯ ಅಧ್ಯಕ್ಷ ಶಂಕರ್ ಭಟ್.ಕೆ. ಅವರು ಆ.27ರಂದು ನಮ್ಮ ಸಂಸ್ಥೆಯ 12 ಮಂದಿ ಎಂಜಿನಿಯರ್ ಗಳ ತಂಡ ಗುಂಡ್ಯ , ಶಿರಾಡಿ ಪರಿಸರದಲ್ಲಿ ವಾಸಿಸುತ್ತಿರುವ ಜನರ ವಿನಂತಿಯ ಮೇರೆಗೆ ಶಾಸಕಿ ತೇಜಸ್ವಿನಿ ರಮೇಶ್ ಅವರೊಂದಿಗೆ ಶಿರಾಡಿ ಘಾಟ್ ರಸ್ತೆಯನ್ನು ವೀಕ್ಷಣೆ ನಡೆಸಿದೆ. ಗುಡ್ಡ, ಮಣ್ಣು ಕುಸಿತಗೊಂಡ ಸ್ಥಳಗಳಿಗೆ ಭೇಟಿ ನೀಡಿ, ಅದನ್ನು ತಡೆಯುವ ನಿಟ್ಟಿನಲ್ಲಿ ಕೆಲವೊಂದು ಪರಿಹಾರ ಸೂತ್ರಗಳನ್ನು ಕಂಡು ಕೊಂಡಿದೆ ಎಂದರು.
ನದಿಯ ಬದಿಗೆ ತಾಗಿಕೊಂಡಿರುವ ರಸ್ತೆಯ ಸುಮಾರು 12 ಭಾಗಗಳಲ್ಲಿ ಭೂ ಕುಸಿತ ಕಂಡು ಬಂದಿದ್ದು, ಆ ಭಾಗದಲ್ಲಿ ಘನ ವಾಹನ ಸಂಚಾರ ನಡೆದಲ್ಲಿ ಅನಾಹುತಗಳಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ 12 ಕಡೆಗಗಳಲ್ಲೂ ಮತ್ತು ಗುಡ್ಡ ಕುಸಿತ ಜಾಗದಲ್ಲಿ ಬೈಪಾಸ್ ರಸ್ತೆಗಳನ್ನು ನಿರ್ಮಿಸಿ ಅಲ್ಲಿ ರಸ್ತೆ ಸರುಕ್ಷತಾ ಗಸ್ತು ಪಡೆ ನಿಯೋಜಿಸಬೇಕು. ಬಳಿಕ ಲಘ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಅವರು ತಿಳಿಸಿದರು.
ರಸ್ತೆ ಬದಿಯ ಬಸಿಕಾಲುವೆಗಳು ಸಮರ್ಪಕವಾಗಿಲ್ಲ. ಪ್ರಸ್ತುತ ಇರುವ ಬಸಿ ಕಾಲುವೆಗಳು ಮಳೆ ನೀರು ಹಾಗೂ ಒರತೆ ನೀರನ್ನು ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿರುವುದಿಲ್ಲ. ಇದರಿಂದಾಗಿ ಗುಡ್ಡೆ ಬದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮೋರಿಗಳಿಂದ ನೀರು ಹೊರ ಹೋಗುವ ಹೆಚ್ಚಿನ ಕಡೆ ಎಲ್ಲಾ ಕಡೆ ಮಣ್ಣು ಕರಗಿದೆ ಎಂದು ಹೇಳಿದರು.
ರಸ್ತೆ ಬದಿಯ ಬಸಿಕಾಲುವೆಗಳ ಪಾತ್ರ ದೊಡ್ಡದು ಮಾಡುವುದು. ಬಸಿ ಕಾಲುವೆಯ ತಳಭಾಗದಲ್ಲಿ ಒರತೆ ನೀರು ಹಾದು ಹೋಗಲು ಸಮರ್ಪಕವಾದ ತೂತುಗಳನ್ನು ಒದಗಿಸುವುದು. ರಸ್ತೆ ಬದಿಯ ಭೂ ಕುಸಿತವಾದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಷ್ಟಕರವಾಗಿರುವುದರಿಂದ ಸದ್ರಿ ಪ್ರದೇಶಗಳಲ್ಲಿ ಇನ್ನೊಂದು ಬದಿಯನ್ನು ಅಗಲಗೊಳಿಸಬೇಕು. ಭೂ ಕುಸಿತ ತಡೆಯಲು ಕೆಲವು ಅವಶ್ಯವಿದ್ದ ಕಡೆಗಳಲ್ಲಿ ವೈಜ್ಞಾನಿಕವಾಗಿ ಗುಡ್ಡವನ್ನು ಕತ್ತರಿಸುವುದು. ಭೂ ಕುಸಿತ ಉಂಟಾದ ರಸ್ತೆಯ ಅರ್ಧಭಾಗದಲ್ಲಿ ವಾಹನ ಸಂಚರಿಸಿದರೆ ಅನಾಹುತಗಳಾಗುವ ಸಂಭವವಿವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವುದು. ರಸ್ತೆಗಳ ಬದಿಗೆ ಸೇಫ್ ಗಾರ್ಡ್ ವಾಲ್ ಅಳವಡಿಸುವುದು. ಎಲ್ಲಾ ಸೇಫ್ ಗಾರ್ಡ್ ವಾಲ್ ಮಧ್ಯೆ ಇರುವ ಎಲ್ಲಾ ಪ್ರದೇಶದಲ್ಲಿ ನೀರು ಇಂಗಿ ಹೋಗದಂತೆ ಉತ್ತಮವಾದ ಸದೃಢವಾದ ಇಂಟರ್‍ಲಾಕ್ ಅಳವಡಿಸುವುದು ಮತ್ತು ಯಾವುದೇ ರಸ್ತೆಗಳ ನಕಾಶೆ ಮತ್ತು ಡಿಸೈನ್ ತಯಾರಿಸುವಾಗ ಸದ್ರಿ ಪ್ರದೇಶಗಳ ಹತ್ತಿರದಲ್ಲಿರುವ ನುರಿತ ಸಿವಿಲ್ ಎಂಜಿನಿಯರ್ ಗಳಿಂದ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸಬೇಕು ಎಂಬ ವಿವಿಧ ಸಲಹೆಗಳನ್ನೊಳಗೊಂಡ ಪರಿಹಾರ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಈ ಸಲಹೆಗಳನ್ನು ರಾಜ್ಯದ ಮುಖ್ಯಮಂತ್ರಿ, ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವರು, ರಾಜ್ಯ ಹೆದ್ದಾರಿ ಸಚಿವರು, ಉಸ್ತುವಾರಿ ಸಚಿವರು, ದ.ಕ. ಮತ್ತು ಹಾಸನ ಜಿಲ್ಲಾಧಿಕಾರಿಗಳು ಸೇರಿದಂತೆ ಈ ಭಾಗದ ಶಾಸಕರುಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ರಾವಾನಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಆನಂದ್ ಕುಮಾರ್ ಎಸ್.ಕೆ, ಕಾರ್ಯದರ್ಶಿ ಅರ್ಜುನ್ ಎಸ್,ಕೆ, ಉಪಾಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಸತ್ಯನಾರಾಯಣ ಭಟ್, ಜತೆ ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯ ವಸಂತ್ ಭಟ್ ಉಪಸ್ಥಿತರಿದ್ದರು.