ಬೈಕಂಪಾಡಿ: ಮಧ್ಯರಾತ್ರಿ ಶ್ರಮದಾನದೊಂದಿಗೆ ರಸ್ತೆ ದುರಸ್ತಿ !

Update: 2018-08-31 15:52 GMT

ಮಂಗಳೂರು, ಆ.31: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ಯುವಕರು ಶ್ರಮದಾನ ನಡೆಸಿ ಪ್ರಮುಖ ರಸ್ತೆಯನ್ನು ದುರಸ್ತಿ ಗೊಳಿಸಿದ ಘಟನೆ ನಡೆದಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಅಡ್ಕ ಕ್ರಾಸ್ ಕೆಐಎಡಿಬಿ ಕಚೇರಿವರಗೆ ವಿಧಾನಸಭಾ ಚುನಾವಣೆಗೆ ಮುಂಚೆ 11 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಕೆಐಎಡಿಬಿ ಕಚೇರಿಯಿಂದ ಅಂಗರಗುಂಡಿ-ಮುಂಗಾರುವರೆಗೆ ರಸ್ತೆಯು ಹೊಂಡಗುಂಡಿಗಳಿಂದ ತೀವ್ರ ನಾದುರಸ್ತಿಯಲ್ಲಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಇನ್ನಷ್ಟು ಗುಂಡಿಗಳಾಗಿ, ರಸ್ತೆಯಲ್ಲಿ ಕೆರೆ ಮಾದರಿಯಲ್ಲಿ ನೀರು ನಿಂತಿತ್ತು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ತೀವ್ರ ಯಾತನಾಮಯ ಪರಿಸ್ಥಿತಿ ಎದುರಿಸುತ್ತಿದ್ದರು. ಕೈಗಾರಿಕಾ ಪ್ರದೇಶಕ್ಕೆ ಸಂಚರಿಸುವವರು ಅಲ್ಲದೆ ಅಂಗರಗುಂಡಿ, ಜೋಕಟ್ಟೆ ಪ್ರದೇಶಗಳಿಗೆ ಬಸ್, ಘನ ವಾಹನಗಳು ತೆರಳಲು ಇದು ಮುಖ್ಯ ರಸ್ತೆಯಾಗಿದ್ದು, ಇಲ್ಲಿನ ನಿವಾಸಿಗಳ ಸಂಚಾರಕ್ಕೆ ತೀವ್ರ ಕಷ್ಟಪಡುವಂತಾಗಿತ್ತು. ಹಲವು ದ್ವಿಚಕ್ರ ಸವಾರರು ಇದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಬಿದ್ದು, ಗಾಯಗೊಂಡ ಘಟನೆಗಳು ನಡೆದಿದ್ದವು.

ಈ ರಸ್ತೆ ದುರಸ್ತಿ ಪಡಿಸಲು ಇಲ್ಲಿನ ನಿವಾಸಿಗಳು ಕೈಗಾರಿಕಾ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಾಗೂ ಮಹಾನಗರಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿಶೇಷವೆಂದರೆ, ಕೆಐಎಡಿಬಿ ಕಚೇರಿ ಎದುರೇ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದಿದ್ದವು. ಕಳೆದ 3-4 ದಿನಗಳಿಂದ ಈ ರಸ್ತೆ ಇನ್ನಷ್ಟು ಜರ್ಜರಿತವಾಗಿ ಸಂಚಾರವೇ ದುಸ್ತರವಾಗಿತ್ತು. ಇದರಿಂದ ಬೇಸತ್ತ ಮತ್ತು ಆಕ್ರೋಶಿತರಾದ ಅಂಗರಗುಂಡಿ ಪ್ರದೇಶದ ಯುವಕರು ಜತೆ ಸೇರಿ ಗುರುವಾರ ರಾತ್ರಿ ಶ್ರಮದಾನ ನಡೆಸಿದರು. ಅದರಂತೆ ಖಾಸಗಿ ಕಾಂಕ್ರಿಟ್ ಮಿಕ್ಸರ್ ಸಂಸ್ಥೆಯಿಂದ ಒಂದು ಲೋಡ್ ಕಾಂಕ್ರಿಟ್ ಖರೀದಿಸಿ ರಸ್ತೆ ಹೊಂಡ ಗುಂಡಿ ತುಂಬಿಸಿದರು. ಶುಕ್ರವಾರ ಬೆಳಗಿನ ಜಾವದವರೆಗೆ ಶ್ರಮದಾನ ನಡೆಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News