ಮಾನವೀಯತೆಯ, ವಿಶ್ವಮಾನವ ಮನೋಭಾವ ನಮ್ಮೆಲ್ಲರದ್ದಾಗಲಿ: ಗಣೇಶ್ ಕಾಮತ್
ಮಂಗಳೂರು, ಆ. 31: ಇತರರನ್ನು ಮಾದರಿಯಾಗಿ ತೆಗೆದುಕೊಳ್ಳುವ ಉತ್ಸಾಹಕ್ಕಿಂತ ತಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಬೇಕು. ಇತರರಿಗೆ ಹೊಸ ಮಾದರಿಯಾಗಿ ಗೌರವದಿಂದ ಬೆಳೆಯುವ ನಿಟ್ಟಿನಲ್ಲಿ ಕೀಳರಿಮೆ ತೊರೆದು ಸ್ವಸಾಮರ್ತ್ಯವನ್ನು ಗುರುತಿಸಿಕೊಂಡು ಮುನ್ನಡೆಯಬೇಕು. ಕರ್ತವ್ಯದಲ್ಲಿ ದೇವರನ್ನು ಕಂಡು ಮಾನವೀಯತೆಯ, ವಿಶ್ವಮಾನವ ಮನೋಭಾವ ನಮ್ಮೆಲ್ಲರದ್ದಾಗಬೇಕು ಎಂದು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್ ಹೇಳಿದರು.
ಅವರು ಸದ್ಭಾವನಾ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಸೌಹಾರ್ದತೆ ನಮ್ಮ ಸಂಸ್ಕೃತಿಯಾಗಬೇಕು ಎಂದವರು ಹೇಳಿದರು.
ಪ್ರಭಾರ ಪ್ರಾಂಶುಪಾಲ ಡಾ. ಡೇಮಿಯನ್ ಎ. ಡಿಮೆಲ್ಲೋ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಎನ್ನೆಸ್ಸೆಸ್ ಘಟಕದ ಸಮನ್ವಯಕಾರ ಸಹ ಪ್ರಾಧ್ಯಾಪಕ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸತ್ಯನಾರಾಯಣ ಭಟ್, ಸದ್ಭಾವನಾ ದಿನದ ಪ್ರಮಾಣ ವಚನ ಬೋಧಿಸಿದರು. ಹರ್ಷಿತಾ ಎನ್ನೆಸ್ಸೆಸ್ ಕುರಿತು ವಿವರಿಸಿದರು. ಮಂಜುಳಾ ಕಾರ್ಯಕ್ರಮ ನಿರ್ವಹಿಸಿ ಅಪೇಕ್ಷಾ ಬಾಳಿಗಾ ವಂದಿಸಿದರು.